ಶ್ರೀನಗರ,ಸೆ 09 (Daijiworld News/RD): ಭಾರತೀಯ ಸೇನಾ ಕ್ಯಾಂಪ್ ಗಳ ಮೇಲೆ ದಾಳಿ ನಡೆಸಲು ಪಾಕಿಸ್ತಾನ ಮೂಲದ ಲಷ್ಕರ್ ಉಗ್ರ ಸಂಘಟನೆಯ ನಾಲ್ಕು ಮಂದಿ ಉಗ್ರರು ಗಡಿಯಲ್ಲಿ ಹೊಂಚು ಹಾಕಿ ಕುಳಿತಿದ್ದಾರೆ ಎಂದು ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಮೂಲಗಳ ಪ್ರಕಾರ, ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ನಲ್ಲಿ ಭಾರತದ ಗಡಿಯೊಳಗೆ ನುಸುಳಲು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಎ-ತೈಬಾದ ನಾಲ್ಕು ಉಗ್ರರು ಹೊಂಚು ಹಾಕುತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ಹೇಳಿದೆ.
ಜಮ್ಮು ಮತ್ತು ಕಾಶ್ಮೀರದ ಭಾರತೀಯ ಸೇನೆ ಮತ್ತು ಇತರ ಭದ್ರತಾ ಪಡೆಗಳ ಶಿಬಿರಗಳ ಮೇಲೆ ದಾಳಿ ನಡೆಸಲು ಉಗ್ರರು ಹವಣಿಸುತ್ತಿದ್ದಾರೆ ಎಂಬ ಮಾಹಿತಿ ನೀಡಿದೆ. ಸಾಂಬಾ ಜಿಲ್ಲೆಯ ಬರಿ ಬ್ರಾಹ್ಮಣ ಶಿಬಿರ ಮತ್ತು ಜಮ್ಮು ಪ್ರದೇಶದ ಸುಂಜವಾನ್ ಮತ್ತು ಕಲ್ಚುಕ್ ಸೇನಾ ಶಿಬಿರಗಳ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾದ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದೇ ಪದೇ ಮುಖಭಂಗಕ್ಕೆ ಒಳಗಾದ ಪಾಕಿಸ್ತಾನ, ಇದೀಗ ಉಗ್ರರನ್ನು ಛೂ ಬಿಡುವ ಮೂಲಕ ಭಾರತದಲ್ಲಿ ರಕ್ತಪಾತ ನಡೆಸಲು ಮುಂದಾಗಿದೆ. ಇದಕ್ಕಾಗಿ ಬಂಧಿತ ಜೈಷೆ ಮೊಹಮ್ಮದ್ ಮುಖ್ಯಸ್ಥ, ಮೋಸ್ಟ್ ವಾಂಟೆಡ್ ಭಯೋತ್ಪಾದಕ ಮಸೂದ್ ಅಜರ್ನನ್ನು ಪಾಕಿಸ್ತಾನ ಮತ್ತೆ , ರಹಸ್ಯವಾಗಿ ಬಿಡುಗಡೆ ಮಾಡಿದೆ. ಅಲ್ಲದೆ ಭಾರತದ ಗಡಿಯುದ್ದಕ್ಕೂ ಸೇನಾಪಡೆ ನಿಯೋಜನೆ ಹೆಚ್ಚಿಸಿದೆ. ರಾಜಸ್ಥಾನ-ಕಾಶ್ಮೀರ ವಲಯದಲ್ಲಿ ಉಗ್ರ ಕೃತ್ಯಗಳಿಗೆ ಕುಮ್ಮಕ್ಕು ನೀಡಲು ಪಾಕ್ ಮುಂದಾಗಿದೆ.