ಬೆಂಗಳೂರು,ಸೆ 09 (Daijiworld News/RD): ಮಾಜಿ ಸಚಿವ ಡಿ ಕೆ ಶಿವಕುಮಾರ್ ಅವರನ್ನು ಬಂಧಿಸಲು ಸಿದ್ದರಾಮಯ್ಯನವರೇ ಕಾರಣ ಎಂದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಕ್ಕೆ ಸಿದ್ದರಾಮಯ್ಯನವರು ಪ್ರತಿಕ್ರಿಯೆ ನೀಡಿದ್ದು, ನಳಿನ್ ಕುಮಾರ್ ಅವರಿಗೆ ಕನಿಷ್ಠ ಜ್ಞಾನವೂ ಇಲ್ಲ, ಅವರಿಗೆ ಬೆಂಕಿ ಹಚ್ಚೊದು ಮಾತ್ರ ಕೆಲಸ ಎಂದು ಕಿಡಿಕಾರಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರ ಮೇಲೆ ಹರಿಹಾಯ್ದ ಮಾಜಿ ಸಿ.ಎಂ. ಸಿದ್ದರಾಮಯ್ಯ, ’ಹುಳಿ ಹಿಂಡುವುದು, ಬೆಂಕಿ ಹಚ್ಚೋದು ನಳಿನ್ ಅವರ ಕೆಲಸ. ಕನಿಷ್ಠ ಜ್ಞಾನ ಇಲ್ಲದವರನ್ನ ಯಾಕೆ ಬಿಜೆಪಿಯವರು ಅಧ್ಯಕ್ಷರನ್ನಾಗಿ ಮಾಡಿದ್ದಾರೋ ಗೊತ್ತಿಲ್ಲ. ಆದಾಯ ತೆರಿಗೆ (ಐಟಿ) ಇಲಾಖೆ ಮತ್ತು ಜಾರಿ ನಿರ್ದೇಶನಾಲಯ(ಇ.ಡಿ.) ಯಾರ ಅಧೀನದಲ್ಲಿವೆ ಎಂಬುದು ಗೊತ್ತಿದೆಯೇ ಎಂದು ಕಟೀಲ್ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಮುಖ್ಯಮಂತ್ರಿಯಾಗಿ ಬಿ ಎಸ್ ಯಡಿಯೂರಪ್ಪ ಅವರು ಬಂದ ಮೇಲೆ ವರ್ಗಾವಣೆ ಮಾಡುವುದು, ದ್ವೇಷದ ರಾಜಕಾರಣ ಮಾಡುವುದಾಗಿದೆ. ಪ್ರವಾಹದಿಂದ ಸಾವಿರಾರು ಜನ ಸಂಕಷ್ಟ ಪಡುತ್ತಿದ್ದು, ಅವರಿಗೆ ಯಾವ ಪರಿಹಾರವನ್ನೂ ಕೇಂದ್ರ ಹಾಗೂ ರಾಜ್ಯ ನೀಡಲಿಲ್ಲ. ರಾಜ್ಯ ಸರ್ಕಾರಕ್ಕೆ ಜನರ ಬಗ್ಗೆ ಕಾಳಜಿಯಿಲ್ಲ ಎಂದು ಕಿಡಿಕಾರಿದರು. ಕೃಷಿ ಭಾಗ್ಯ, ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್ ತನಿಖೆ ನಡೆಸಲು ಮುಂದಾಗಿದ್ದು ಈ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಅಕ್ರಮ, ಭ್ರಷ್ಟಾಚಾರ ಇದ್ದರೆ ತನಿಖೆ ಮಾಡಲಿ ನಾವು ಕಾನೂನಿಗೆ ಅಡ್ಡಿಪಡಿಸುವುದಿಲ್ಲ ಎಂದರು.