ಬೆಂಗಳೂರು,ಸೆ 09 (Daijiworld News/RD): ದೇಶಾದ್ಯಂತ ಹೊಸ ಮೋಟಾರು ವಾಹನ ತಿದ್ದುಪಡಿ ಕಾಯಿದೆ ಜಾರಿಯಾಗಿದ್ದೇ ತಡ ಸಂಚಾರಿ ನಿಯಮ ಉಲ್ಲಂಘಿಸಿದ ವಾಹನ ಸವಾರರ ಜೇಬಿಗೆ ಕತ್ತರಿ ಬಿದ್ದಿದ್ದು, ಟ್ರಾಫಿಕ್ ಪೊಲೀಸರು ಭರ್ಜರಿ ದಂಡ ವಸೂಲಿ ಮಾಡುತ್ತಿದ್ದಾರೆ. ಹೊಸ ಜಾರಿ ನಂತರ ಕೆಲವು ವಾಹನ ಸವಾರರಲ್ಲಿ ಹಲವು ಗೊಂದಲಗಳು ಆರಂಭವಾಗಿದ್ದು, ವಾಹನಗಳಿಗೆ ಸಂಬಂಧಿಸಿದ ಡೈವಿಂಗ್ ಲೈಸನ್ಸ್ ಸೇರಿ ಇನ್ನಿತರ ಮೂಲ ಪ್ರತಿಗಳನ್ನು ಚಾಲನೆ ವೇಳೆ ಕಡ್ಡಾಯವಾಗಿ ಹೊಂದಿರಬೇಕೆ ಎನ್ನುವ ಪ್ರಶ್ನೆಗೆ ಬೆಂಗಳೂರು ಪೊಲೀಸರು ಒಂದು ಹೊಸ ದಾರಿಯನ್ನು ಸೂಚಿಸುವ ಮೂಲಕ ಉತ್ತರಿಸಿದ್ದಾರೆ.
ಕೇಂದ್ರ ಸರ್ಕಾರ ಡಿಜಿಟಲ್ ಇಂಡಿಯಾ ಯೋಜನೆಯಡಿ ಪರಿಚಯಿಸಿರುವ ಡಿಜಿ ಲಾಕರ್ ಆ್ಯಪ್ನಲ್ಲಿಯೇ ವಾಹನಗಳ ದಾಖಲೆ ಪ್ರತಿಗಳನ್ನು ಹೊಂದಿರಲು ಅವಕಾಶ ನೀಡಲಾಗಿದ್ದು, ಈ ಹಿನ್ನಲೆಯಲ್ಲಿ ವಾಹನ ಸವಾರರು ಡಿಜಿ ಲಾಕರ್ ಹೊಂದಿದ್ದರೆ ದಾಖಲೆಗಳು ಮೂಲ ಪ್ರತಿಯನ್ನು ಹೊಂದಿರಬೇಕಾದ ಅವಶ್ಯಕತೆ ಇರುವುದಿಲ್ಲಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ. ಹೀಗಾಗಿ ಇನ್ನು ಮುಂದೆ ವಾಹನ ಚಾಲನೆ ವೇಳೆ ಡಿಎಲ್, ಆರ್ಸಿ ಪ್ರಮಾಣ ಪತ್ರಗಳ ಮೂಲ ಪ್ರತಿಯನ್ನು ಕಡ್ಡಾಯವಾಗಿ ಹೊಂದಿರಬೇಕಾಗಿಲ್ಲ ಡಿಜಿ ಲಾಕರ್ ನಲ್ಲಿ ವಾಹನಗಳ ದಾಖಲೆ ಇದ್ದರೆ ಸಾಕು ಎಂದಿದ್ದಾರೆ.
ಬಹುತೇಕ ವಾಹನ ಸವಾರರಲ್ಲಿ ಮನಸ್ಸಿನಲ್ಲಿ ಡಿಎಲ್ ಮತ್ತು ಆರ್ಸಿ ಪ್ರಮಾಣ ಪತ್ರಗಳ ಮೂಲ ಪ್ರತಿಯನ್ನೇ ಹೊಂದಿರಬೇಕು ಇಲ್ಲವಾದರೆ ದಂಡವಿಧಿಸುತ್ತಾರೆ ಎನ್ನುವ ಮಾಹಿತಿ ಇದ್ದು, ಈ ಕುರಿತು ಸ್ಪಷ್ಟನೆ ನೀಡಿರುವ ಟ್ರಾಫಿಕ್ ಪೊಲೀಸರು ಡಿಎಲ್ ಮತ್ತು ಆರ್ಸಿ ಹೊರತುಪಡಿಸಿ ವಿಮಾ ಪತ್ರವನ್ನು ಮಾತ್ರ ಮೂಲ ಪ್ರತಿಯಲ್ಲಿರಬೇಕು ಎಂದಿದ್ದಾರೆ. ಡಿಜಿ ಲಾಕರ್ ಅಥವಾ ಎಮ್ಪರಿವಾಹನ್ ಆ್ಯಪ್ನಲ್ಲಿ ವಾಹನ ದಾಖಲೆಗಳನ್ನು ಸಂಗ್ರಹಣೆ ಮಾಡಬಹುದಾಗಿದ್ದು, ಮೋಟಾರ್ ವೆಹಿಕಲ್ ಕಾಯ್ದೆ 1988ರ ಪ್ರಕಾರ ವಾಹನ ತಪಾಸಣೆ ವೇಳೆ ಡಿಜಿ ಲಾಕರ್ ಅಥವಾ ಎಮ್ಪರಿವಾಹನ್ ಆ್ಯಪ್ ಮೂಲಕವೂ ವಾಹನ ದಾಖಲೆಗಳನ್ನು ಮಾನ್ಯತೆ ಮಾಡಬಹುದು ಎಂದು ಹೇಳಿದ್ದಾರೆ.