ಕೊಚ್ಚಿ, ಸೆ.10(Daijiworld News/SS): ಉಗ್ರರಿಂದ ದಾಳಿ ನಡೆಯುವ ಸಾಧ್ಯತೆಯ ಕುರಿತು ಭಾರತೀಯ ಸೇನೆಯ ಗುಪ್ತಚರ ಇಲಾಖೆ ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಕೇರಳ ಸೇರಿದಂತೆ ದಕ್ಷಿಣ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು ಬೆನ್ನಲ್ಲಿ ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪಾಕಿಸ್ತಾನ ಉಗ್ರರ ಮೂಲಕ ಭಾರತದ ಮೇಲೆ ದಾಳಿ ನಡೆಸುವ ಯೋಜನೆಯನ್ನು ಹೊಂದಿದೆ ಎಂಬ ಮಾಹಿತಿಗಳು ಗುಪ್ತಚರ ಇಲಾಖೆಗೆ ದೊರಕಿವೆ.
ಹೈ ಅಲರ್ಟ್ ಘೋಷಣೆ ಕುರಿತಾಗಿ ಕೇರಳದ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಲೋಕನಾಥ್ ಬೆಹ್ರಾ ಮಾಹಿತಿ ನೀಡಿದ್ದು, ಅಯಕಟ್ಟಿನ ಸ್ಥಳದಲ್ಲಿ ಬಾಂಬ್ ನಿಷ್ಕ್ರಿಯ ದಳವನ್ನು ಸನ್ನದ್ದ ಸ್ಥಿತಿಯಲ್ಲಿಡಲಾಗಿದ್ದು ಪ್ರಮುಖ ಪ್ರದೇಶಗಳಲ್ಲಿ ತಪಾಸಣೆ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕೇರಳದ ಪ್ರಮುಖ ವಾಣಿಜ್ಯ ನಗರಗಳಾದ ಕೊಚ್ಚಿ, ಮಲಪ್ಪುರಂ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲೂ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು ಜನನಿಬಿಡ ಪ್ರದೇಶಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಭಾರತೀಯ ಸೇನೆಯ ಗುಪ್ತಚರ ಇಲಾಖೆ ಮಾಹಿತಿಯ ಆಧಾರದಲ್ಲಿ ಪೊಲೀಸರು ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ. ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ ಹಾಗೂ ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ತಪಾಸಣೆಯನ್ನು ನಡೆಸುತ್ತಿದ್ದಾರೆ.
ಈ ನಡುವೆ ಗುಜರಾತ್ ಕರಾವಳಿಯ ಸರ್ ಕ್ರೀಕ್ ಸಮುದ್ರ ಪ್ರದೇಶದಲ್ಲಿ ಬೋಟ್ ಪತ್ತೆಯಾಗಿದ್ದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.