ಜಮ್ಮು-ಕಾಶ್ಮೀರ, ಸೆ.10(Daijiworld News/SS): ಶ್ರೀನಗರದ ಕೆಲವೊಂದು ಸೂಕ್ಷ್ಮ ಪ್ರದೇಶಗಳನ್ನು ಹೊರತುಪಡಿಸಿ ಜಮ್ಮು-ಕಾಶ್ಮೀರ ಹಲವೆಡೆ ಹಂತ ಹಂತವಾಗಿ ನಿರ್ಬಂಧವನ್ನು ಕಡಿತಗೊಳಿಸುವ ಮೂಲಕ ಶೀಘ್ರದಲ್ಲೇ ಸಂಪೂರ್ಣ ತೆರವುಗೊಳಿಸುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಜಮ್ಮು-ಕಾಶ್ಮೀರದ ಪರಿಸ್ಥಿತಿ ಸಹಜತೆಯತ್ತ ಮರಳುತ್ತಿದ್ದು ಹಲವೆಡೆ ಭಾರತೀಯ ಸೇನೆ ವಿಧಿಸಿದ್ದ ನಿರ್ಬಂಧವನ್ನು ತೆರವುಗೊಳಿಸಲಾಗುತ್ತಿದೆ. ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಾಗಿ 36 ದಿನಗಳ ಬಳಿಕ ಅಧಿಕಾರಿಗಳು ನಿರ್ಬಂಧ ತೆರವುಗೊಳಿಸುವ ಕುರಿತಾದ ನಿರ್ಧಾರ ಕೈಗೊಂಡಿದ್ದಾರೆ. ಕಣಿವೆ ರಾಜ್ಯದ ಪ್ರಮುಖ ವಾಣಿಜ್ಯ ಪ್ರದೇಶವಾದ ಲಾಲ್ ಚೌಕ್ನಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್ಗಳನ್ನು ಇಂದು ತೆರವುಗೊಳಿಸಲಾಗಿದ್ದು, ಭದ್ರತೆಯನ್ನು ಮುಂದುವರಿಸಲಾಗಿದೆ.
ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಮ್ಮು-ಕಾಶ್ಮೀರದ ಕೆಲವೊಂದು ಅಯಕಟ್ಟಿನ ಪ್ರದೇಶಗಳಲ್ಲಿ ಹೆಚ್ಚಿನ ಬಂದೋಬಸ್ಥ್ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಣಿವೆ ರಾಜ್ಯದಲ್ಲಿ ಲ್ಯಾಂಡ್ ಲೈನ್ ಸಂಪರ್ಕ ಮರುಸ್ಥಾಪಿಸಲಾಗಿದ್ದು. ಮೊಬೈಲ್ ಪೋನ್ ಹಾಗೂ ಇಂಟರ್ನೆಟ್ ಬಳಕೆಗೆ ವಿಧಿಸಲಾಗಿರುವ ನಿರ್ಬಂಧ ಜಾರಿಯಲ್ಲಿದ್ದು ಶೀಘ್ರದಲ್ಲಿ ಸರಿಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು- ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ಕುರಿತಾಗಿ ಆಗಸ್ಟ್ 5 ರಂದು ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡ ಬಳಿಕ ಮುಂಜಾಗರೂಕತಾ ಕ್ರಮವಾಗಿ ಕಣಿವೆಯಲ್ಲಿ ಭಾರೀ ಭದ್ರತಾ ಸಿಬಂಧಿಯನ್ನು ನಿಯೋಜಿಸಲಾಗಿದ್ದು ಹಲವಾರು ನಿರ್ಬಂಧಗಳನ್ನು ವಿಧಿಸಲಾಗಿತ್ತು.