ಬೆಂಗಳೂರು, ಸೆ 10 (Daijiworld News/RD): ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಆಗೋವರೆಗೆ ತಾನು ಕಾಲಿಗೆ ಚಪ್ಪಲಿ ಹಾಕಲ್ಲ ಎಂದು ಪ್ರತಿಜ್ಞೆ ಮಾಡಿದ ಅಭಿಮಾನಿಗೆ ಸಿಎಂ ಸ್ವತಃ ತಾವೇ ಚಪ್ಪಲಿ ತೆಗೆಸಿಕೊಟ್ಟಿದ್ದಾರೆ.
14 ತಿಂಗಳುಗಳಿಂದ ಚಪ್ಪಲಿ ಹಾಕದೆ ಬರಿಗಾಲಲ್ಲಿ ತಿರುಗಾಡುತ್ತಿದ್ದ ಶಿವಕುಮಾರ್ ಆರಾಧ್ಯ, ಮಂಡ್ಯ ತಾಲೂಕಿನ ಉಪ್ಪರಕನಹಳ್ಳಿಯ ಬಿಜೆಪಿ ಕಾರ್ಯಕರ್ತ. ಇವರು ಸೋಮವಾರ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದರು. ಆಗ ಅವರ ಕಾಲಲ್ಲಿ ಚಪ್ಪಲಿ ಇಲ್ಲದಿರುವುದನ್ನು ಕಂಡ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಯಡಿಯೂರಪ್ಪ ಅವರು ತಮ್ಮ ಕಾರಿನಲ್ಲೇ ಶಿವಕುಮಾರ್ ಅವರನ್ನು ಕರೆದೊಯ್ದು ಚಪ್ಪಲಿ ಕೊಡಿಸಿದ್ದಾರೆ. ನಂತರ ಅವರ ಸಮ್ಮುಖದಲ್ಲಿ ಕಾಲಿಗೆ ಚಪ್ಪಲಿ ಹಾಕಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಶಿವಕುಮಾರ್ "ಇಂದು ನನಗಾದ ಸಂತೋಷಕ್ಕೆ ಪಾರವಿಲ್ಲ, ಅಪ್ಪಾಜಿ (ಯಡಿಯೂರಪ್ಪ) ಪ್ರೀತಿಯಿಂದ ನನಗೆರಡು ಏಟು ಹೊಡೆದು ಮುಂದೆ ಹೀಗೆಲ್ಲಾ ಮಾಡಬೇಡ ಎಂದರು. ಮತ್ತು ಅವರ ಮುಂದೆಯೇ ನನಗೆ ಚಪ್ಪಲಿ ಹಾಕಿಸಿದರು. ಆದರೆ ನಾನು ಈ ಚಪ್ಪಲಿ ಕಾಲಿಗೆ ಹಾಕಲ್ಲ ಮತ್ತು ಯಾವತ್ತೂ ಬಳಸಲ್ಲ, ಅದನ್ನು ನನ್ನ ಮನೆಯ ಶೋ ಕೇಸ್ ನಲ್ಲಿ ಭದ್ರವಾಗಿ ಇರಿಸುವೆ" ಎಂದು ಹೇಳಿದ್ದಾರೆ.
ಕಳೆದ ವರ್ಷ 2 ದಿನ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿ, ಆ ಸ್ಥಾನದಿಂದ ಕೆಳಗಿಳಿದ ಯಡಿಯೂರಪ್ಪ, ಅವರು ಮತ್ತೆ ಸಿಎಂ ಆಗೋವರೆಗೂ ಚಪ್ಪಲಿ ತೊಡುವುದಿಲ್ಲವೆಂದು ಶಿವಕುಮಾರ್ ಪ್ರತಿಜ್ಞೆ ಮಾಡಿದ್ದರು. ಇದೀಗ ವರ್ಷದ ನಂತರ ಯಡಿಯೂರಪ್ಪ ಮತ್ತೆ ಸಿಎಂ ಆಗಿದ್ದು ತಮ್ಮ ಅಭಿಮಾನಿಗೆ ಶಪಥ ಪೂರೈಸಿದ್ದಕ್ಕಾಗಿ ಹೊಸ ಚಪ್ಪಲಿಯನ್ನು ಉಡುಗೊರೆ ನೀಡಿದ್ದಾರೆ.