ನವದೆಹಲಿ, ಸೆ 10 (Daijiworld News/MSP):32 ವರ್ಷದ ಯುವಕನೊಬ್ಬ 81 ವರ್ಷದ ವೃದ್ದನಂತೆ ವೇಷ ಧರಿಸಿ ನ್ಯೂಯಾರ್ಕ್ಗೆ ಪ್ರಯಾಣಿಸಲು ಯತ್ನಿಸಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಘಟನೆ ನವದೆಹಲಿ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಸಿಕ್ಕಿಬಿದ್ದ ಯುವಕನನ್ನು ಅಹಮದಾಬಾದ್ ನ ಜಯೇಶ್ ಪಟೇಲ್ ಎಂದು ಗುರುತಿಸಲಾಗಿದೆ. ಈತ 81 ವರ್ಷದ ವೃದ್ದ ಆರ್ಮಿಕ್ ಸಿಂಗ್ ನಂತೆ ವೇಷ ಧರಿಸಿ ನಟಿಸಿ ವಿಮಾನ ನಿಲ್ದಾಣಕ್ಕೆ ಬಂದಿದ್ದ. ವೃದ್ಧರ ರೀತಿ ಗಡ್ಡ - ಕೂದಲಿಗೆ ಬಿಳಿ ಬಣ್ಣ ಬಳಿದು, ತಲೆಗೆ ಬಿಳಿವಸ್ತ್ರದ ಮುಂಡಾಸು ಸುತ್ತಿ, ಅಶಕ್ತರಂತೆ ವ್ಹೀಲ್ ಚೇರ್ ನಲ್ಲಿ ಕುಳಿತುಕೊಂಡು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ. ವ್ಹೀಲ್ ಚೇರ್ ನಲ್ಲಿ ಬಂದ ಆಸಾಮಿಯನ್ನು ಪರಿಶೀಲನೆಗಾಗಿ ಎದ್ದುನಿಲ್ಲುವಂತೆ ಅಧಿಕಾರಿಗಳು ಹೇಳಿದಾಗ ತಾನು ಅಸಮರ್ಥ ತನಗೆ ಅಸಾಧ್ಯ ಎಂದು ಹೇಳಿದ್ದ.
ಅಧಿಕಾರಿಗಳಿಗೆ ಈತನ ನಡವಳಿಕೆ ಅನುಮಾನಸ್ಪದವಾಗಿ ಕಂಡ ಕಾರಣ ಮತ್ತಷ್ಟು ವಿಚಾರಣೆ ನಡೆಸಿದಿದಾಗ, ಯುವಕ ತಾನು ವೃದ್ದ ಎಂದು ನಟಿಸುವ ಸಲುವಾಗಿ ಜೀರೋ ಪವರ್ ಕನ್ನಡಕವನ್ನು ಧರಿಸಿದ್ದ. ಅಲ್ಲದೆ ಆತನ ಕೈ ಚರ್ಮ ಸೂಕ್ಷ್ಮವಾಗಿ ಗಮನಿಸಿದಾಗ ಸುಕ್ಕುಗಟ್ಟಿರಲಿಲ್ಲ. ಅಲ್ಲದೆ ಆತನ ಧ್ವನಿ ಕೂಡಾ ವೃದ್ಧರಿಗೆ ಹೋಲಿಕೆ ಇರಲಿಲ್ಲ. ಪಾಸ್ ಪೋರ್ಟ್ ಪ್ರಕಾರ ಆತನ ಹುಟ್ಟಿದ ದಿನಾಂಕ 1 ಫೆಬ್ರವರಿ 1938 ಆಗಿತ್ತು. ಹೀಗಾಗಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಿಜ ಬಣ್ಣ ಬಯಲಾಗಿದೆ.
ಈತ ವೃದ್ದನಂತೆ ನಟಿಸಿ ನಕಲಿ ಪಾಸ್ಪೋರ್ಟ್ನೊಂದಿಗೆ ನ್ಯೂಯಾರ್ಕ್ ಪ್ರಯತ್ನಿಸುತ್ತಿದ್ದನೆಂದು ತಿಳಿದುಬಂದಿದೆ. ಇಮಿಗ್ರೇಶನ್ ಅಧಿಕಾರಿಗಳಿಗೆ ತಕ್ಷಣವೇ ಮಾಹಿತಿ ನೀಡಿ ಹೆಚ್ಚಿನ ತನಿಖೆ ಮತ್ತು ಕ್ರಮಕ್ಕಾಗಿ ಯುವಕನನ್ನು ಅವರಿಗೆ ಹಸ್ತಾಂತರಿಸಲಾಗಿದೆ.