ಬೆಳಗಾವಿ, ಸೆ 10 (Daijiworld News/RD): ಭೀಕರ ಪ್ರವಾಹಕ್ಕೆ ತುತ್ತಾಗಿ, ಮನೆ ಕಳೆದುಕೊಂಡು ಪೋಷಕರ ಜೊತೆ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದ ಐದು ವರ್ಷದ ಬಾಲಕನೋರ್ವ ಮೃತಪಟ್ಟಿರುವ ಘಟನೆ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನ್ ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟ ಬಾಲಕನನ್ನು ದೊಡ್ಡ ಹಂಪಿಹೊಳಿ ಗ್ರಾಮದ ಅಬ್ದುಲ್ ಸಾಬ್ ಮುಲ್ಲನ್ನ ಎಂದು ಗುರುತಿಸಲಾಗಿದ್ದು, ಈತ ರಹೇಮಾನ್ ಸಾಬ ಮುಲ್ಲನ್ನ ಮತ್ತು ಫರಿದಾ ಬೇಗಂ ದಂಪತಿಯ ಪುತ್ರ. ಪ್ರವಾಹದಿಂದಾಗಿ ಮನೆ ಕಳೆದುಕೊಂಡ ಅವರು ಸುರೇಬಾನದ ಎಪಿಎಂಸಿಯ ಪರಿಹಾರ ಕೇಂದ್ರದಲ್ಲಿಆಶ್ರಯ ಪಡೆಯುತ್ತಿದ್ದರು. ತೀವ್ರ ಜ್ವರದಿಂದ ಬಳಲುತ್ತಿದ್ದ ಈ ಐದು ವರ್ಷದ ಬಾಲಕ, ಹಸಿವಿನಿಂದಾಗಿ ಮೃತಪಟ್ಟಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿದ ಜಿಲ್ಲಾಧಿಕಾರಿ, ಆತನಿಗೆ ಜ್ವರ ಬಂದಿತ್ತು, ಆತನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು. ಆದರೂ ಜ್ವರ ನಿಯಂತ್ರಣಕ್ಕೆ ಬಾರದೇ ಬಾಲಕ ಸಾವನ್ನಪ್ಪಿದ್ದಾನೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಈಗಾಗಲೇ ಸಿಎಂ ಯಡಿಯೂರಪ್ಪ ಅವರು ಬೆಳಗಾವಿ ಜಿಲ್ಲಾ ಪ್ರವಾಸದಲ್ಲಿದ್ದು, ಇಂದು ಎಪಿಎಂಸಿಯ ಕಾಳಜಿ ಕೇಂದ್ರ ಭೇಟಿ ನೀಡಿ ನಂತರ ಕಾಳಜಿ ಕೇಂದ್ರದಲ್ಲಿ ಮೃತಪಟ್ಟ ಬಾಲಕನ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಭಾರೀ ಮಳೆಯಿಂದಾಗಿ ಮಲಪ್ರಭಾ ನದಿ ಉಕ್ಕಿ ಹರಿದು ಪ್ರವಾಹ ಸಂಭವಿಸಿತ್ತು. ಪ್ರವಾಹದಿಂದಾಗಿ ಹಿರೆಹಂಪಿಹೊಳಿ ಗ್ರಾಮ ಜಲಾವೃತವಾಗಿದ್ದು, ಅಲ್ಲಿನ ಜನರು ಸುರೇಬಾನದ ಎಪಿಎಂಸಿ ಪರಿಹಾರ ಕೇಂದ್ರದಲ್ಲಿ ಒಂದೂವರೆ ತಿಂಗಳಿಂದಲೂ ದಂಪತಿ ಇಲ್ಲಿ ವಾಸಿಸುತ್ತಿದ್ದರು.