ಬೆಂಗಳೂರು, ಸೆ.10(Daijiworld News/SS): ಸಂಚಾರ ನಿಯಮಗಳನ್ನು ಪಾಲಿಸಲು ನಿರ್ಲಕ್ಷ್ಯ ತೋರುತ್ತಿದ್ದ ಸವಾರರು ಅಲರ್ಟ್ ಆಗಿದ್ದಾರೆ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಸಂಚಾರ ನಿಯಮ ಉಲ್ಲಂಘನೆಯ ಪರಿಷ್ಕೃತ ದಂಡ ವಾಹನ ಸವಾರರಿಗೆ ಬಿಸಿ ಮುಟ್ಟಿಸುತ್ತಿದೆ.
ಮೋಟಾರು ವಾಹನ ಕಾಯ್ದೆ ಉಲ್ಲಂಘಿಸಿ ವಾಹನಗಳಲ್ಲಿ ಸಂಚರಿಸುತ್ತಿದ್ದ ಸವಾರರಿಗೆ ಸಂಚಾರ ನಿಯಮಗಳ ಅರಿವು ಮೂಡಿಸುವುದರ ಜತೆಗೆ ನಿಯಮ ಗಾಳಿಗೆ ತೂರಿದರೆ ಭಾರೀ ಪ್ರಮಾಣದ ದಂಡ ವಿಧಿಸಲಾಗುತ್ತಿದೆ. ಪರಿಣಾಮ ನಿರ್ಲಕ್ಷ್ಯದಿಂದ ರಸ್ತೆಗಿಳಿಯುವ ವಾಹನ ಸವಾರರು ಪೊಲೀಸರ ಕೈಗೆ ಸಿಕ್ಕಿಬಿದ್ದು ಅಂಗಲಾಚುತ್ತಿದ್ದಾರೆ. ಮಾತ್ರವಲ್ಲ ಪೊಲೀಸರು ವಾಹನ ಸವಾರರಿಗೆ ಎಚ್ಚರಿಕೆ ನೀಡಿ ಕಳಿಸುತ್ತಿದ್ದಾರೆ.
ಸಂಚಾರ ನಿಯಮ ಉಲ್ಲಂಘನೆಗೆ ಭಾರೀ ದಂಡ ವಿಧಿಸುವ ಕಟ್ಟುನಿಟ್ಟಿನ ಸಾರಿಗೆ ಸಂಚಾರ ನಿಯಮಗಳನ್ನು ಹೊಂದಿರುವ ಕೇಂದ್ರದ ಮೋಟಾರು ವಾಹನ ತಿದ್ದುಪಡಿ ಕಾಯಿದೆಗೆ ಹಲವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದರೆ, ಇನ್ನೊಂದೆಡೆ ಮೆಚ್ಚುಗೆಯ ಮಾತುಗಳು ಕೂಡ ಕೇಳಿಬರುತ್ತಿದೆ. ನೂತನ ಮೋಟಾರು ವಾಹನ ತಿದ್ದುಪಡಿ ಕಾಯಿದೆ ಜಾರಿಯಿಂದಾಗಿ ಭಾರೀ ಪ್ರಮಾಣದ ದಂಡ ಪಾವತಿಸಬೇಕಾಗಿ ಬಂದ ಹಲವಾರು ಪ್ರಕರಣಗಳು ದೇಶದಾದ್ಯಂತ ವರದಿಯಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಕಾಯಿದೆಯ ಪರ ಹಾಗೂ ವಿರೋಧದ ಚರ್ಚೆಗಳು ನಡೆಯುತ್ತಿವೆ.
ಕಾಯಿದೆ ಪ್ರಕಾರ ಕನಿಷ್ಠ ದಂಡದ ಮೊತ್ತವು 100 ರೂಪಾಯಿಂದ 1000 ರೂಪಾಯಿ ಏರಿಕೆಯಾಗಿದ್ದು ಲೈಸನ್ಸ್ ಇಲ್ಲದೆ ವಾಹನ ಚಲಾಯಿಸಿದರೆ 500ರ ಬದಲಾಗಿ 5000 ದಂಡ, ವೇಗದ ಚಾಲನೆಗೆ 400 ಬದಲಾಗಿ 1000 ದಂಡ, ಹೆಲ್ಮೆಟ್ ರಹಿತ ಪ್ರಯಾಣಕ್ಕೆ 100ರ ಬದಲಾಗಿ 1000 ದಂಡ ಹಾಗೂ ಮೂರು ತಿಂಗಳ ಲೈಸೆನ್ಸ್ ರದ್ದು ಮಾಡುವ ಅವಕಾಶವಿದೆ.