ಉತ್ತರಪ್ರದೇಶ,ಸೆ 10 (Daijiworld News/RD): ದೇಶಾದ್ಯಂತ ನೂತನ ಮೋಟಾರು ಕಾಯ್ದೆ ಜಾರಿಯಾದ ಬಳಿಕ, ವಾಹನ ಸವಾರರಲ್ಲಿ ಆತಂಕ ಸೃಷ್ಟಿಸಿರುವಾಗಲೇ, ಟ್ರಾಫಿಕ್ ಪೊಲೀಸರು ವಾಹನ ತಡೆಯುತ್ತಿದ್ದ ವೇಳೆ ಪೊಲೀಸರಿಗೆ ಹೆದರಿ ಕಾರು ಚಾಲಕನೊಬ್ಬ, ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ, ನೊಯ್ಡಾದಲ್ಲಿ ನಡೆದಿದೆ.
ಸೋಮವಾರ ಸಂಜೆ ಸುಮಾರು 6 ಗಂಟೆ ಹೊತ್ತಿನಲ್ಲಿ ಟ್ರಾಫಿಕ್ ಪೊಲೀಸರು ವಾಹನಗಳನ್ನು ಅಡ್ಡಗಟ್ಟಿ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಅದೇ ದಾರಿಯಲ್ಲಿ ಬಂದ ಒಂದು ಕಾರನ್ನು ಕೂಡ ಅಧಿಕಾರಿಗಳು ಅಡ್ಡಗಟ್ಟಿದ್ದಾರೆ. ಈ ವೇಳೆ ಕಾರು ಚಾಲಕ ತನ್ನ ವಾಹನವನ್ನು ಟ್ರಾಫಿಕ್ ಪೊಲೀಸ್ ತಡೆಯುತ್ತಿದ್ದಂತೆಯೇ ಕಾರಿನ ಚಾಲಕ ಆಘಾತಗೊಂಡಿದ್ದು, ಆತನಿಗೆ ಕಾರಿನಲ್ಲೇ ಹೃದಯಾಘಾತವಾಗಿದೆ.
ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತು ಆದರೆ ಆತ ದಾರಿ ಮಧ್ಯೆದಲ್ಲಿ ಅಸುನೀಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಆತನನ್ನು ತಪಾಸಣೆ ಮಾಡಿದ್ದ ವೈದ್ಯರು ಆತ ಸಕ್ಕರೆ ಖಾಯಿಲೆ ಮತ್ತು ಅತಿಯಾದ ರಕ್ತದೊತ್ತಡದಿಂದ ಬಳಲುತ್ತಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಈ ಕುರಿತು ವಿಷಾಧ ವ್ಯಕ್ತಪಡಿಸಿರುವ ಮೃತ ವ್ಯಕ್ತಿಯ ತಂದೆ, “ಸಂಚಾರಿ ನಿಯಮಗಳನ್ನು ಬದಲಿಸಿರುವುದು ಒಳ್ಳೆಯದೆ. ಆದರೆ, ಕಾನೂನಿನ ಅಡಿಯಲ್ಲಿ ವಾಹನವನ್ನು ಪರಿಶೀಲನೆ ನಡೆಸಲು ಒಂದು ವಿಧಾನ ಇದೆ. ಆದರೆ, ನಮ್ಮ ವಾಹನ ತಪಾಸಣೆ ನಡೆಸುವಾಗ ಈ ವಿಧಾನಗಳನ್ನು ಪಾಲಿಸಲಾಗಿಲ್ಲ. ತಪಾಸಣೆ ಎಂಬ ಹೆಸರಿನಲ್ಲಿ ಪೊಲೀಸರು ಅಮಾಯಕರ ಮೇಲೆ ದರ್ಪ ತೋರಿಸಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.