ಮೈಸೂರು, ಸೆ.10(Daijiworld News/SS): ನಾಡ ಹಬ್ಬ ಮೈಸೂರು ದಸರಾದ ಮೆರವಣಿಗೆಯಲ್ಲಿ ಭಾಗವಹಿಸಲು ಇದೇ ಮೊದಲ ಬಾರಿಗೆ ಆಗಮಿಸಿದ ಈಶ್ವರ ಆನೆಯನ್ನು ವಾತಾವರಣಕ್ಕೆ ಹೊಂದಿಕೊಳ್ಳದ ಹಿನ್ನೆಲೆಯಲ್ಲಿ ಕಾಡಿಗೆ ಹಿಂದಕ್ಕೆ ಕಳುಹಿಸಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ.
ಇದೇ ಮೊದಲ ಬಾರಿಗೆ ಈಶ್ವರ ಆನೆಯನ್ನು ದಸರಾ ಗಜಪಡೆಗೆ ಸೇರಿಸಿಕೊಳ್ಳಲಾಗಿತ್ತು. ಆದರೆ ನಗರ ಪ್ರದೇಶದಲ್ಲಿ ಗಜಪಡೆ ತಾಲೀಮು ಆರಂಭಿಸಿದ ದಿನದಿಂದಲೂ ಈಶ್ವರ ಆನೆ ಗಾಬರಿಗೊಳ್ಳುತಿತ್ತು. ಆಗ ವೈದ್ಯರು ಹಾಗೂ ಅಧಿಕಾರಿಗಳು ದಿನ ಕಳೆಯುತ್ತಿದ್ದಂತೆ ಆನೆ ಈ ವಾತಾವರಣಕ್ಕೆ ಹೊಂದಿಕೊಳ್ಳುತ್ತದೆ ಎಂಬ ವಿಶ್ವಾಸದಲ್ಲಿದ್ದರು. ಆದರೆ ಪ್ರತಿದಿನ ತಾಲೀಮು ಮಾಡುತ್ತಿರುವಾಗಲೂ ಈಶ್ವರ ಆನೆ ನಗರದ ವಾತಾವರಣಕ್ಕೆ ಬೆಚ್ಚಿಬೀಳುತ್ತಿತ್ತು. ಹೊಸ ವಾತಾವರಣಕ್ಕೆ ಅದು ಹೊಂದಿಕೊಳ್ಳಲು ಸಾಧ್ಯವಾಗದ ಹಿನ್ನೆಲೆ ಈಶ್ವರ ಆನೆಯನ್ನು ವಾಪಸ್ ಅರಣ್ಯಕ್ಕೆ ಕಳುಹಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಫ್ ಅಲೆಕ್ಸಾಂಡರ್, ಇಂತಹ ದೂರುಗಳು ಬಂದಾಗ ಬದಲಾಯಿಸಲೇ ಬೇಕಾಗುತ್ತದೆ. ಭಧ್ರತೆ ದೃಷ್ಟಿಯಿಂದ ಈ ನಿರ್ಧಾರ ಅನಿವಾರ್ಯವಾಗಿದೆ. ಸಾಹಸ ಪಟ್ಟು ಆನೆಗಳನ್ನ ಸಜ್ಜುಗೊಳಿಸುತ್ತಿದ್ದೆವು. ಇಂತಹ ದೂರುಗಳು ಬಂದಾಗ ಸಹಜವಾಗಿ ಹಿಂದೆ ಸರಿಯಬೇಕಾಗುತ್ತದೆ ಎಂದು ಹೇಳಿದ್ದಾರೆ.