ನವದೆಹಲಿ, ಸೆ 10 (Daijiworld News/RD): ಜಮ್ಮು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಬಳಿಕ, ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದ್ದು, ಕಣಿವೆ ನಾಡಿನಲ್ಲಿ ಸೇಬು ಖರೀದಿ ಕುಸಿತಗೊಂಡು ರೈತರು ಸಂಕಷ್ಟ ಪಡುತ್ತಿದ್ದಾರೆ. ಈ ಕಷ್ಟವನ್ನು ನಿವಾರಿಸುವ ಸಲುವಾಗಿ ಕೇಂದ್ರ ಸರ್ಕಾರ ಹೊಸ ಕ್ರಮ ಕೈಗೊಳ್ಳುವ ಮೂಲಕ ಸೇಬು ಕೃಷಿಕರಿಗೆ ಸಿಹಿ ನೀಡಿದ್ದಾರೆ.
ಇತ್ತೀಚೆಗೆ ಜಮ್ಮು ಕಾಶ್ಮೀರ ಕಣಿವೆ ಪ್ರದೇಶದಲ್ಲಿ ವ್ಯಾಪಾರ ವಹಿವಾಟು ಕುಂಠಿತಗೊಂಡಿದ್ದು, ಅಲ್ಲಿನ ಜನರು ಆರ್ಥಿಕವಾಗಿ ಸಂಕಷ್ಟ ಪಡುತ್ತಿರುವುದನ್ನು ಮನಗಂಡು ಸರ್ಕಾರ ಇದೀಗ ಸೂಕ್ತ ಪರಿಹಾರ ಕಲ್ಪಿಸಿದೆ. ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ (ಡಿಬಿಟಿ) ಯೋಜನೆಯಡಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಯಾವುದೇ ಮಧ್ಯವರ್ತಿಯಿಲ್ಲದೆ ಸೇಬು ಕೃಷಿಕರಿಂದ ನೇರವಾಗಿ ಸೇಬು ಹಣ್ಣಗಳನ್ನು ಖರೀದಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಮೂಲಕ ಸೇಬು ಬೆಳೆಗಾರರ ಆದಾಯವನ್ನು ಹೆಚ್ಚಿಸಿ ನಷ್ಟವನ್ನು ತಡೆಯುಲು ಈ ಮೂಲಕ ಪ್ರಯತ್ನಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮಾಹಿತಿ ಮತ್ತು ಪ್ರಸಾರ ನಿರ್ದೇಶನಾಲಯ, ಜಮ್ಮು ಕಾಶ್ಮೀರದ ಶೋಪಿಯಾನ್, ಬಟೆಂಗೋ, ಪರಿಂಪೊರ, ಸೊಪೋರ್ನಲ್ಲಿ ಬೆಳೆದಿರುವ ಸೇಬು ಹಣ್ಣುಗಳನ್ನು ಮಂಡಿಯಲ್ಲಿ ಸಂರಕ್ಷಿಸಲಾಗುವುದು. ಇದಕ್ಕೆ ವಿಶೇಷವಾದ ಬೆಲೆ ನಿಗದಿ ಮಾಡಿ ಖರೀದಿಸಲಾಗುವುದು. ಈಗಾಗಲೇ 12 ಲಕ್ಷ ಮೆಟ್ರಿಕ್ ಟನ್ ಸೇಬು ಹಣ್ಣುಗಳನ್ನು ಸಂರಕ್ಷಿಸಲಾಗಿದೆ ಎಂದು ತಿಳಿಸಿದೆ.
ಸೇಬು ಬೆಳೆಗೆ ಹೆಸರುವಾಸಿಯಾಗಿರುವ ಜಮ್ಮು ಕಾಶ್ಮೀರ. ವಿಶ್ವದಾದ್ಯಂತ ಈ ಹಣ್ಣಿಗೆ ಬಲು ಬೇಡಿಕೆ ಇದ್ದು, ಸೇಬು ಕೃಷಿಯೇ ಇಲ್ಲಿನ ಜನರ ಮೂಲಾಧಾರ. ಕೇಂದ್ರ ಸರ್ಕಾರ 370ನೇ ವಿಧಿ ರದ್ದುಪಡಿಸಿದ ಬಳಿಕ ಕಾಶ್ಮೀರದಲ್ಲಿ ಪ್ರವಾಸಿಗರ ಸಂಖ್ಯೆಯೂ ಕಡಿಮೆಯಾಗಿದ್ದು, ಹಾಗಾಗಿ ಸೇಬು ಕೃಷಿಯನ್ನೇ ನಂಬಿಕೊಂಡಿದ್ದ ಕಾಶ್ಮೀರ ಪ್ರವಾಸಿಗರೇ ಇಲ್ಲದೆ ಗ್ರಾಹಕರು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದರು. ಹಾಗಾಗಿ ಸರ್ಕಾರದ ಈ ನಿರ್ಧಾರದಿಂದ ತೀವ್ರ ನಷ್ಟವಾಗಿ ಜೀವನಕ್ಕೆ ಆಧಾರವಾಗಿದ್ದ ಸೇಬು ಹಣ್ಣುಗಳಿಗೆ ಬೇಡಿಕೆಯಿಲ್ಲದೆ, ಬೇರೆ ಮಾರುಕಟ್ಟೆಗಳಿಗೂ ಸಾಗಿಸಲಾರದೆ ಅಸಹಾಯಕ ಪರಿಸ್ಥಿತಿಯಲ್ಲಿ ಜಮ್ಮು ಕಾಶ್ಮೀರದ ಸೇಬು ಬೆಳೆಗಾರರು ಒದ್ದಾಡುತ್ತಿದ್ದು, ಸರ್ಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.