ನವದೆಹಲಿ, ಜು. 29 (DaijiworldNews/AA): ಹಾರ್ಮುಜ್ ಜಲಸಂಧಿಯಲ್ಲಿನ ಉದ್ವಿಗ್ನತೆಯನ್ನು ತಕ್ಷಣ ಕಡಿಮೆ ಮಾಡಬೇಕು ಹಾಗೂ ಅಂತಾರಾಷ್ಟ್ರೀಯ ಜಲಮಾರ್ಗಗಳಲ್ಲಿ ಮುಕ್ತ ಮತ್ತು ಅಡೆತಡೆಯಿಲ್ಲದ ನೌಕಾಯಾನವನ್ನು ಪುನಃ ಸ್ಥಾಪಿಸಬೇಕು ಎಂದು ಭಾರತ ಒತ್ತಾಯಿಸಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಪಶ್ಚಿಮ ಏಷ್ಯಾ ಪರಿಸ್ಥಿತಿ ಕುರಿತ ಮುಕ್ತ ಚರ್ಚೆಯನ್ನು ಉದ್ದೇಶಿಸಿ ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ಪ್ರತಿನಿಧಿ ರಾಯಭಾರಿ ಪರ್ವತನೇನಿ ಹರೀಶ್, "ಅಲ್ಪ ವಿರಾಮದ ಬಳಿಕ ಮತ್ತೆ ಸಂಘರ್ಷಗಳು ಆರಂಭವಾಗಿರುವುದು ಆತಂಕಕಾರಿ ಬೆಳವಣಿಗೆ. ಸಂವಾದ ಮತ್ತು ರಾಜತಾಂತ್ರಿಕ ಮಾತುಕತೆಗಳ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು" ಎಂದು ಹೇಳಿದರು.
"ಪಶ್ಚಿಮ ಏಷ್ಯಾವನ್ನು ಭಾರತಕ್ಕೆ ಅತ್ಯಂತ ಮಹತ್ವದ ಪ್ರದೇಶವಾಗಿದೆ. ಈ ಪ್ರದೇಶದಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ಅಲ್ಪ ವಿರಾಮ ದೊರೆತಿದ್ದರೂ, ಈಗ ಮತ್ತೆ ದಾಳಿಗಳು ಹಾಗೂ ಯುದ್ಧೋನ್ಮಾದ ಹೆಚ್ಚುತ್ತಿರುವುದು ತೀವ್ರ ಕಳವಳಕಾರಿ ಸಂಗತಿ. ಉದ್ವಿಗ್ನತೆಯನ್ನು ತಕ್ಷಣ ತಗ್ಗಿಸುವಂತೆ ಭಾರತ ಆಗ್ರಹಿಸುತ್ತದೆ" ಎಂದರು.
"ಈ ತಿಂಗಳ ಆರಂಭದಲ್ಲಿ ಹಾರ್ಮುಜ್ ಜಲಸಂಧಿ ಮೂಲಕ ಸಾಗುತ್ತಿದ್ದ ವಾಣಿಜ್ಯ ಹಡಗುಗಳ ಮೇಲೆ ನಡೆದ ದಾಳಿಗಳು ಭಾರತೀಯ ನಾಗರಿಕರ ಮೇಲೂ ನೇರ ಪರಿಣಾಮ ಬೀರಿವೆ. ಈ ದಾಳಿಗಳಲ್ಲಿ ಹಲವಾರು ಭಾರತೀಯರು ಗಾಯಗೊಂಡಿದ್ದು, ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ. ಒಬ್ಬ ಭಾರತೀಯ ದುಃಖಕರವಾಗಿ ಮೃತಪಟ್ಟಿದ್ದು, ಮತ್ತೊಬ್ಬರು ನಾಪತ್ತೆಯಾಗಿದ್ದಾರೆ. ಹಾರ್ಮುಜ್ ಜಲಸಂಧಿಯಂತಹ ಅಂತಾರಾಷ್ಟ್ರೀಯ ಜಲಮಾರ್ಗಗಳಲ್ಲಿ ನಾವಿಕರನ್ನು ಗುರಿಯಾಗಿಸಿಕೊಂಡು ನಡೆಸುವ ದಾಳಿಗಳು ಹಾಗೂ ಸುರಕ್ಷಿತ ಮತ್ತು ಮುಕ್ತ ನೌಕಾಯಾನಕ್ಕೆ ಅಡ್ಡಿಯಾಗುವ ಯಾವುದೇ ಹಿಂಸಾಚಾರವನ್ನು ಭಾರತ ಸದಾ ಖಂಡಿಸಿದೆ" ಎಂದು ತಿಳಿಸಿದರು.
"ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಮರುಸ್ಥಾಪಿಸಲು ರಾಜತಾಂತ್ರಿಕ ಮಾತುಕತೆಗಳೇ ಏಕೈಕ ಮಾರ್ಗ ಎಂದು ಭಾರತ ದೃಢವಾಗಿ ನಂಬಿದೆ. ಪ್ರದೇಶದಲ್ಲಿ ವಾಣಿಜ್ಯ ಹಡಗುಗಳು ಹಾಗೂ ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ದಾಳಿಗಳು ತಕ್ಷಣ ನಿಲ್ಲಬೇಕು. ಅಂತರರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ, ಈ ಪ್ರದೇಶದ ಜಲಮಾರ್ಗಗಳಲ್ಲಿ ಮುಕ್ತ ಮತ್ತು ಅಡೆತಡೆಯಿಲ್ಲದ ನೌಕಾಯಾನ ಹಾಗೂ ವ್ಯಾಪಾರವನ್ನು ಶೀಘ್ರದಲ್ಲೇ ಮರುಸ್ಥಾಪಿಸಬೇಕು" ಎಂದು ಅಭಿಪ್ರಾಯಪಟ್ಟರು.