ನವದೆಹಲಿ, ಸೆ 11 (Daijiworld News/MSP): ಬಾಲಿವುಡ್ ರಂಗೀಲಾ ಚಿತ್ರದ ಖ್ಯಾತಿ ನಟಿ ಉರ್ಮಿಳಾ ಮಾತೋಂಡ್ಕರ್ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಆರೇ ತಿಂಗಳ ಒಳಗೆ ಕೈಗೆ ಗುಡ್ ಬೈ ಹೇಳಿ ಹೊರನಡೆದಿದ್ದಾರೆ. ಕಳೆದ ಲೋಕಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ಸೇರಿದ್ದ ಉರ್ಮಿಳಾ, ಆರೇ ತಿಂಗಳ ಕಾಂಗ್ರೆಸ್ ರಾಜಕಾರಣದ ನಂತರ ಹೊರನಡೆದಿದ್ದಾರೆ.
ಪಕ್ಷದೊಳಗೆ ನಡೆಯುತ್ತಿರುವ ಒಳ ರಾಜಕೀಯದಿಂದ ಬೇಸರವಾಗಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ಉರ್ಮಿಳಾ ಮಾತೋಂಡ್ಕರ್ ತಮ್ಮ ರಾಜೀನಾಮೆಗೆ ಕಾರಣ ನೀಡಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಉರ್ಮಿಳ , 'ನಾನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಈ ಹಿಂದೆ ಹಲವಾರು ಬಾರಿ ಪ್ರಯತ್ನಿಸಿದ ಬಳಿಕವೂ, ಮೇ 16ರಂದು ನೀಡಿದ್ದ ಪತ್ರ ಸಂಬಂಧ, ಮುಂಬೈ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಮಿಲಿಂದ್ ದೇವ್ರಾ ಯಾವುದೇ ತನಿಖೆ ನಡೆಸಿರಲಿಲ್ಲ. ಅಂದೇ ನಾನು ರಾಜೀನಾಮೆ ಬಗ್ಗೆ ಯೋಚಿಸಿದ್ದೆ. ಇದಾದ ಬಳಿಕ ನಾನು ಬರೆದ ಪತ್ರವನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಲಾಯಿತು. ಇದು ವಿಶ್ವಾಸ ದ್ರೋಹವಾಗಿತ್ತು ಎಂದಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಮುಂಬೈ ಉತ್ತರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಉರ್ಮಿಳಾ ಮಾತೋಂಡ್ಕರ್ ಬಿಜೆಪಿಯ ಗೋಪಾಲ್ ಶೆಟ್ಟಿ ವಿರುದ್ಧ ಭಾರಿ ಮತಗಳ ಅಂತರದಿಂದ ಸೋಲನುಭವಿಸಿದರು.