ನವದೆಹಲಿ, ಜು. 29 (DaijiworldNews/AK): ಯುವಜನರ ಧ್ವನಿಯನ್ನು ಎಲ್ಲಾ ರಾಜಕೀಯ ಪಕ್ಷಗಳು ಗೌರವಿಸಬೇಕು ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದರು.

ಲೋಕಸಭೆಯಲ್ಲಿ ʻಸಾರ್ವಜನಿಕ ಪರೀಕ್ಷೆಗಳು (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ, 2026ʼರ ಕುರಿತ ಚರ್ಚೆ ವೇಳೆ ಮಾತನಾಡಿದ ಅವರು, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಸಮರ್ಥಿಸಿಕೊಂಡರು. ಯುವಕರ ಶಕ್ತಿಯನ್ನು ಗೌರವಿಸಬೇಕು ಎಂದರು.
ವಿದ್ಯಾರ್ಥಿಗಳ ಪ್ರತಿಭಟನೆ ಯಾವುದೇ ಕೋಪ ಅಥವಾ ಹಿಂದೆಯಲ್ಲ, ಅದು ʻಭಾರತದ ಯುವಜನತೆಯ ಭರವಸೆಯ ಅಭಿವ್ಯಕ್ತಿʼ ಎಂದು ಬಣ್ಣಿಸಿದರು. ತಮ್ಮ ಆತಂಕ, ದುಗುಡವನ್ನು ಅಭಿವ್ಯಕ್ತಪಡಿಸಲು ಯುವ ಸಮೂಹ ಬೀದಿಗಿಳಿದಿರುವುದು ದೇಶದ ಭವಿಷ್ಯದ ಬಗ್ಗೆ ವಿಶ್ವಾಸ ಮೂಡಿಸಿದೆ. ನಮ್ಮ ದೇಶದ ಭವಿಷ್ಯವಾದ ಯುವಜನರು ಬೀದಿಗಿಳಿದು ಹೋರಾಟ ಮಾಡಿದ್ದು ನೋಡಿ ನಿಜಕ್ಕೂ ನನಗೆ ಅಪಾರ ಸಂತೋಷವಾಯಿತು, ಭರವಸೆಯೂ ಮೂಡಿತು ಎಂದು ರಾಹುಲ್ ಗಾಂಧಿ ಹೇಳಿದರು.