ನವದೆಹಲಿ,ಜು. 29 (DaijiworldNews/AK): ವಿದ್ಯಾರ್ಥಿ ಚಳವಳಿಯಲ್ಲಿದ್ದ ಮೇಲೆ ಬಂಧನ ಎದುರಿಸಲು ಸಿದ್ಧರಿರಬೇಕು ಎಂದು ಪ್ರತಿಭಟನಾಕಾರರ ಮೇಲೆ ಪೊಲೀಸ್ ಕ್ರಮವನ್ನು ಕೇಂದ್ರ ಸಚಿವ ಜೆಪಿ ನಡ್ಡಾ ಸಮರ್ಥಿಸಿಕೊಂಡಿದ್ದಾರೆ.

ಸಂಸತ್ತಿನ ರಾಜ್ಯಸಭೆಯಲ್ಲಿ ಬುಧವಾರ ವಿಪಕ್ಷಗಳು ಮತ್ತು ಆಡಳಿತಾರೂಢ ಎನ್ಡಿಎ ನಾಯಕರ ನಡುವೆ ತೀವ್ರ ವಾಗ್ವಾದ ನಡೆಯಿತು. ದೆಹಲಿಯ ಜಂತರ್ ಮಂತರ್ ಮತ್ತು ‘ಸಂಸದ್ ಚಲೋ’ ಮೆರವಣಿಗೆಯ ವೇಳೆ ಸಿಜೆಪಿ ನೇತೃತ್ವದ ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ಬಲಪ್ರಯೋಗವನ್ನು ಜೆಪಿ ನಡ್ಡಾ ಸಮರ್ಥಿಸಿಕೊಂಡರು.
ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಪೊಲೀಸರ ಪ್ರಾಥಮಿಕ ಕರ್ತವ್ಯ. ಪ್ರತಿಭಟನೆ ಹಾಗೂ ಚಳವಳಿಗಳಲ್ಲಿ ಭಾಗವಹಿಸುವವರು ಪೊಲೀಸ್ ಕ್ರಮಗಳನ್ನು ಎದುರಿಸಲು ಸಿದ್ಧರಿರಬೇಕು ಎಂದು ಹೇಳಿದ್ದಾರೆ.
ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಈ ವಿಷಯವನ್ನು ಪ್ರಸ್ತಾಪಿಸಿ, ಬಿಜೆಪಿ ಆಡಳಿತದಲ್ಲಿ ಪ್ರಜಾಪ್ರಭುತ್ವವೂ ಸುರಕ್ಷಿತವಾಗಿಲ್ಲ, ಸಾಮಾನ್ಯ ಜನರೂ ಸುರಕ್ಷಿತವಾಗಿಲ್ಲ. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಯುವಜನರ ಮೇಲೆ ಕ್ರೂರ ಬಲಪ್ರಯೋಗ ನಡೆಸಿದ ಅಧಿಕಾರಿಗಳು ಮತ್ತು ಅಪರಾಧಿಗಳು ನಿರಾತಂಕವಾಗಿ ಓಡಾಡುತ್ತಿದ್ದಾರೆ ಎಂದು ಆರೋಪಿಸಿದರು.
ಖರ್ಗೆ ಅವರಿಗೆ ಉತ್ತರಿಸಿದ ಜೆ.ಪಿ. ನಡ್ಡಾ, ಸಾರ್ವಜನಿಕ ಆಸ್ತಿಗೆ ಧಕ್ಕೆ ಉಂಟಾಗದಂತೆ ಮತ್ತು ಕಾನೂನು ಸುವ್ಯವಸ್ಥೆ ಹದಗೆಡದಂತೆ ತಡೆಯಲು ಪೊಲೀಸರು ಸಾಮಾನ್ಯ ಕ್ರಮ ಕೈಗೊಂಡಿದ್ದಾರೆ. ಪ್ರತಿಯೊಂದು ಪೊಲೀಸ್ ಕ್ರಮವನ್ನೂ ರಾಜಕೀಯಗೊಳಿಸುವುದು ಸರಿಯಲ್ಲ. ನಾನು ಕೂಡ ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಕಾಂಗ್ರೆಸ್ ಆಡಳಿತದ ವೇಳೆ ವಿದ್ಯಾರ್ಥಿ ನಾಯಕನಾಗಿದ್ದಾಗ ತರಗತಿಯಿಂದಲೇ ಎರಡು ಬಾರಿ ಬಂಧನಕ್ಕೊಳಗಾಗಿದ್ದೆ ಎಂದು ತಮ್ಮ ವಿದ್ಯಾರ್ಥಿ ಜೀವನದ ಉದಾಹರಣೆ ನೀಡಿದರು.