ಸಂಗ್ರೂರ್, ಜು. 29 (DaijiworldNews/TA): ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಪಂಜಾಬ್ನ ಸಂಗ್ರೂರ್ ನ್ಯಾಯಾಲಯ ಜಾಮೀನು ಸಹಿತ ವಾರಂಟ್ ಹೊರಡಿಸಿದೆ. 2026ರ ಸೆಪ್ಟೆಂಬರ್ 19ರಂದು ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಿ ಜಾಮೀನು ಪಡೆಯುವಂತೆ ನ್ಯಾಯಾಲಯ ಸೂಚಿಸಿದೆ. 2023ರಲ್ಲಿ ಸಂಗ್ರೂರ್ ನಿವಾಸಿ ಹಾಗೂ ಬಜರಂಗ ದಳದ ಕಾರ್ಯಕರ್ತ ಹಿತೇಶ್ ಭಾರ್ದ್ವಾಜ್ ದಾಖಲಿಸಿದ್ದ ಮಾನಹಾನಿ ದೂರಿನ ಆಧಾರದ ಮೇಲೆ ನ್ಯಾಯಾಲಯ ಈ ಕ್ರಮ ಕೈಗೊಂಡಿದೆ.

ಪ್ರಕರಣದ ಹಿನ್ನೆಲೆ : ಕರ್ನಾಟಕ ವಿಧಾನಸಭೆ ಚುನಾವಣೆಯ ವೇಳೆ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗ ದಳವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸೇರಿದಂತೆ ಕೆಲವು ಸಂಘಟನೆಗಳೊಂದಿಗೆ ಉಲ್ಲೇಖಿಸಿ, ದ್ವೇಷ ಹರಡುವ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಘೋಷಿಸಿತ್ತು. ಈ ಹೇಳಿಕೆಯಿಂದ ಬಜರಂಗ ದಳದ ಪ್ರತಿಷ್ಠೆಗೆ ಧಕ್ಕೆಯಾಗಿದೆ ಎಂದು ಹಿತೇಶ್ ಭಾರ್ದ್ವಾಜ್ ಆರೋಪಿಸಿದ್ದರು.
ಅಕ್ರಮ ಸಂಘಟನೆಗಳೊಂದಿಗೆ ಬಜರಂಗ ದಳವನ್ನು ಹೋಲಿಕೆ ಮಾಡಿರುವುದರಿಂದ ಸಂಘಟನೆಯ ಸದಸ್ಯರು ಹಾಗೂ ಬೆಂಬಲಿಗರ ಮಾನಹಾನಿಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದ್ದು, 100 ಕೋಟಿ ರೂ. ಮಾನಹಾನಿ ಪರಿಹಾರ ಹಾಗೂ 10 ಲಕ್ಷ ರೂ. ಕಾನೂನು ವೆಚ್ಚ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲಾಗಿದೆ.
ಈ ಹಿಂದೆ ಪ್ರಕರಣವನ್ನು ನಾಗರಿಕ (ಸಿವಿಲ್) ಸ್ವರೂಪದ್ದೆಂದು ಪರಿಗಣಿಸಲಾಗಿತ್ತು. ಆದರೆ ಇದೀಗ ನ್ಯಾಯಾಲಯ ಅದನ್ನು ಕ್ರಿಮಿನಲ್ ಪ್ರಕರಣವಾಗಿ ಪರಿಗಣಿಸಿ ವಿಚಾರಣೆ ನಡೆಸುತ್ತಿದೆ. ಸೆಪ್ಟೆಂಬರ್ 19ರಂದು ಮಲ್ಲಿಕಾರ್ಜುನ ಖರ್ಗೆ ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗುವಂತೆ ಸೂಚಿಸಲಾಗಿದ್ದು, ಹಾಜರಾಗದಿದ್ದರೆ ಅವರ ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸುವ ಸಾಧ್ಯತೆ ಇದೆ ಎಂದು ನ್ಯಾಯಾಲಯ ತಿಳಿಸಿದೆ.