ನವದೆಹಲಿ, ಜು. 29 (DaijiworldNews/AA): ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಹೇಳಿಕೆಗಳು ವೈಯಕ್ತಿಕ ರಾಜಕೀಯ ದಾಳಿಯಲ್ಲ, ಬದಲಾಗಿ ರಾಷ್ಟ್ರವ್ಯಾಪಿ ಸಾರ್ವಜನಿಕ ಭಾವನೆ ಮತ್ತು ವಿದ್ಯಾರ್ಥಿಗಳ ಆಕಾಂಕ್ಷೆಗಳ ಪ್ರತಿಬಿಂಬ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ.

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪ್ರಿಯಾಂಕಾ ಗಾಂಧಿ ಪ್ರಶ್ನಿಸಿಲ್ಲ, ಅವರು ದೇಶದ ಪರ ಧ್ವನಿ ಎತ್ತಿದ್ದಾರೆ. ಅದು ವಯಕ್ತಿಕವಲ್ಲ, ಜನರ, ವಿದ್ಯಾರ್ಥಿಗಳ ಮತ್ತು ದೇಶದ ನಾಗರಿಕರ ಪರವಾದ ದನಿಯಾಗಿದೆ" ಎಂದರು.
ಇದಕ್ಕೂ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪ್ರಿಯಾಂಕಾ ಗಾಂಧಿ, "ತಮ್ಮ ಹೇಳಿಕೆಗಳು ದಾಖಲಿತ ಸಂಗತಿಗಳನ್ನು ಆಧರಿಸಿವೆ ಮತ್ತು ಮಹಿಳೆಯರ ಬಗ್ಗೆ ಅವರಿಗಿರುವ ಮನೋಭಾವದ ಬಗ್ಗೆ ಹೇಳಿದ್ದೇನೆ. ಸಂಸದೀಯ ಕ್ರಮ ಅಥವಾ ನಿರ್ಬಂಧಗಳ ಬೆದರಿಕೆಗೆ ನಾನು ಬಗ್ಗುವುದಿಲ್ಲ" ಎಂದು ಹೇಳಿದರು.
"2009 ರ ಮಂಗಳೂರು ಪಬ್ ದಾಳಿಗೆ ಸಂಬಂಧಿಸಿದ ವ್ಯಕ್ತಿಯನ್ನು ಪ್ರಹ್ಲಾದ್ ಜೋಶಿ ಬಿಜೆಪಿಗೆ ಸೇರಿಸಿದ್ದು ಸೇರಿದಂತೆ ಹಿಂದಿನ ಘಟನೆಗಳನ್ನು ಕಾಂಗ್ರೆಸ್ ಮುಖಂಡರು ಉಲ್ಲೇಖಿಸಿದ್ದಾರೆ. ಇದರಲ್ಲಿ ಸಂಸತ್ತಿಗೆ ವಿರುದ್ಧವಾಗಿ ಏನಿತ್ತು? ಅದು ಸತ್ಯ. ಸತ್ಯವನ್ನು ಹೇಳಿದ್ದಕ್ಕಾಗಿ ಅವರು ನನ್ನನ್ನು ಶಿಕ್ಷಿಸಲು ಬಯಸಿದರೆ, ಶಿಕ್ಷಿಸಲಿ ನಾನು ಸತ್ಯವನ್ನು ಮಾತನಾಡುತ್ತೇನೆ" ಎಂದು ತಿಳಿಸಿದರು.