ನವದೆಹಲಿ, ಜು. 29 (DaijiworldNews/TA): ‘ನೀಟ್’ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ವಿಚಾರವಾಗಿ ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಪಕ್ಷಗಳು ತೀವ್ರ ಪ್ರತಿಭಟನೆ ನಡೆಸಿ ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದರೆ, ಮತ್ತೊಂದೆಡೆ ತೃಣಮೂಲ ಕಾಂಗ್ರೆಸ್ ಸಂಸದೆ ಹಾಗೂ ನಟಿ ಸಾಯನಿ ಘೋಷ್ ಸಂಸತ್ ಭವನದ ಆವರಣದಲ್ಲಿ ಚಿತ್ರೀಕರಿಸಿದ ರೀಲ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಮಳೆ ಸುರಿಯುತ್ತಿದ್ದ ವೇಳೆ ಸಂಸತ್ ಭವನದ ಆವರಣದಲ್ಲಿ ಸಾಯನಿ ಘೋಷ್ ಅವರು ಚಲನಚಿತ್ರ ‘ತಾಲ್’ನ ‘ನೆಹಿ ಸಾಮ್ನೇ ತು’ ಹಿನ್ನೆಲೆ ಗೀತೆಯೊಂದಿಗೆ ಸುಮಾರು 20 ಸೆಕೆಂಡ್ಗಳ ರೀಲ್ಸ್ ಚಿತ್ರೀಕರಿಸಿ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮಂಗಳವಾರ ಪೋಸ್ಟ್ ಮಾಡಲಾದ ಈ ವೀಡಿಯೊ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿದ್ದು, 87 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಹಾಗೂ 5 ಸಾವಿರಕ್ಕೂ ಅಧಿಕ ಹಂಚಿಕೆಗಳನ್ನು ಪಡೆದುಕೊಂಡಿದೆ.
ಆದರೆ ಈ ವಿಡಿಯೊಗೆ ಮೆಚ್ಚುಗೆಯ ಜೊತೆಗೆ ತೀವ್ರ ಟೀಕೆಗಳೂ ವ್ಯಕ್ತವಾಗಿವೆ. ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ‘ನೀಟ್’ ಪರೀಕ್ಷೆಯ ಅಕ್ರಮದ ಕುರಿತು ಸಂಸತ್ತಿನೊಳಗೆ ತೀವ್ರ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ, ಸಂಸದೆ ರೀಲ್ಸ್ ಚಿತ್ರೀಕರಿಸಿರುವುದು ಸೂಕ್ತವೇ ಎಂಬ ಪ್ರಶ್ನೆಯನ್ನು ಅನೇಕರು ಎತ್ತಿದ್ದಾರೆ. "ಜನರು ನಿಮ್ಮನ್ನು ದೇಶದ ಪ್ರಮುಖ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತಲು ಆಯ್ಕೆ ಮಾಡಿದ್ದಾರೆ, ರೀಲ್ಸ್ ಮಾಡಲು ಅಲ್ಲ" ಎಂದು ಹಲವಾರು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿದ್ದು, ಸಾರ್ವಜನಿಕ ಪ್ರತಿನಿಧಿಗಳ ಆದ್ಯತೆಗಳ ಬಗ್ಗೆ ಚರ್ಚೆಗೆ ಈ ಘಟನೆ ಕಾರಣವಾಗಿದೆ. ಇದೀಗ ಸಾಯನಿ ಘೋಷ್ ಅವರ ಈ ರೀಲ್ಸ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿದ್ದು, ಪರ-ವಿರೋಧ ಅಭಿಪ್ರಾಯಗಳ ನಡುವೆ ಹೊಸ ರಾಜಕೀಯ ಚರ್ಚೆಗೆ ನಾಂದಿ ಹಾಡಿದೆ.