ನವದೆಹಲಿ, ಜು. 29 (DaijiworldNews/TA): ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಆಡಳಿತಾವಧಿಯಲ್ಲಿ ತೀವ್ರ ರಾಜಕೀಯ ವಿವಾದಕ್ಕೆ ಕಾರಣವಾಗಿದ್ದ ತಲಬಿರಾ-II ಕಲ್ಲಿದ್ದಲು ಬ್ಲಾಕ್ ಹಂಚಿಕೆ ಪ್ರಕರಣಕ್ಕೆ ಸುಪ್ರೀಂ ಕೋರ್ಟ್ ಅಂತಿಮ ತೆರೆ ಎಳೆದಿದೆ. ಪ್ರಕರಣದಲ್ಲಿ ಡಾ. ಮನಮೋಹನ್ ಸಿಂಗ್ ವಿರುದ್ಧ ಯಾವುದೇ ಕ್ರಿಮಿನಲ್ ವಿಚಾರಣೆಗೆ ಅಗತ್ಯವಾದ ಸಾಕ್ಷ್ಯಾಧಾರಗಳಿಲ್ಲ ಎಂದು ಸಿಬಿಐ ಸಲ್ಲಿಸಿದ್ದ ವರದಿಯನ್ನು ಅಂಗೀಕರಿಸಿರುವ ಸುಪ್ರೀಂ ಕೋರ್ಟ್, 2015ರಲ್ಲಿ ವಿಶೇಷ ಸಿಬಿಐ ನ್ಯಾಯಾಲಯ ನೀಡಿದ್ದ ಸಮನ್ಸ್ ಆದೇಶವನ್ನು ರದ್ದುಗೊಳಿಸಿ ಅವರಿಗೆ ಮರಣೋತ್ತರವಾಗಿ ಕ್ಲೀನ್ ಚಿಟ್ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಹಾಗೂ ನ್ಯಾಯಮೂರ್ತಿ ವಿ. ಮೋಹನ ಅವರಿದ್ದ ಪೀಠ ಈ ಮಹತ್ವದ ತೀರ್ಪು ನೀಡಿದೆ. ಸಿಬಿಐ ಸಲ್ಲಿಸಿದ್ದ ಬಿ-ರಿಪೋರ್ಟ್ ಅನ್ನು ಅಂಗೀಕರಿಸಿದ ನ್ಯಾಯಪೀಠ, ತನಿಖಾ ಸಂಸ್ಥೆಯ ವರದಿಯನ್ನು ತಿರಸ್ಕರಿಸಿ ವಿಚಾರಣೆ ಮುಂದುವರಿಸಲು ವಿಶೇಷ ನ್ಯಾಯಾಲಯದ ಬಳಿ ಸಮರ್ಪಕ ಕಾರಣಗಳಿರಲಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಸಿಬಿಐ ಎರಡು ಪ್ರತ್ಯೇಕ ಹಂತಗಳಲ್ಲಿ ನಡೆಸಿದ ವಿಸ್ತೃತ ತನಿಖೆಯಲ್ಲೂ ಡಾ. ಮನಮೋಹನ್ ಸಿಂಗ್ ವಿರುದ್ಧ ಯಾವುದೇ ಅಪರಾಧ ಪ್ರಕರಣ ಸಾಬೀತಾಗಿಲ್ಲ ಎಂದು ತೀರ್ಮಾನಿಸಲಾಗಿತ್ತು. ಆದರೂ 2015ರಲ್ಲಿ ವಿಶೇಷ ಸಿಬಿಐ ನ್ಯಾಯಾಲಯವು ಮನಮೋಹನ್ ಸಿಂಗ್ ಸೇರಿದಂತೆ ಐವರ ವಿರುದ್ಧ ಕ್ರಿಮಿನಲ್ ಗೂಢಾಲೋಚನೆ ಹಾಗೂ ನಂಬಿಕೆ ದ್ರೋಹ ಸೇರಿದಂತೆ ವಿವಿಧ ಆರೋಪಗಳಡಿ ವಿಚಾರಣೆ ಎದುರಿಸುವಂತೆ ಸಮನ್ಸ್ ಜಾರಿಗೊಳಿಸಿತ್ತು.
ಡಿಸೆಂಬರ್ 2024ರಲ್ಲಿ ಡಾ. ಮನಮೋಹನ್ ಸಿಂಗ್ ನಿಧನರಾದ ಬಳಿಕ ಮೇಲ್ಮನವಿ ತಾಂತ್ರಿಕವಾಗಿ ನಿಷ್ಪರಿಣಾಮಕಾರಿಯಾಗಿದ್ದರೂ, ವಿಚಾರಣಾ ನ್ಯಾಯಾಲಯದ ಆದೇಶದ ಸಿಂಧುತ್ವವನ್ನು ಪರಿಶೀಲಿಸುವುದು ಅಗತ್ಯ ಎಂದು ಅವರ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣದ ಕಾನೂನು ಅಂಶಗಳನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್, ವಿಶೇಷ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿ ಪ್ರಕರಣವನ್ನು ಸಂಪೂರ್ಣವಾಗಿ ಮುಕ್ತಾಯಗೊಳಿಸಿದೆ.
ಏನಿದು ಪ್ರಕರಣ? : 2005ರಲ್ಲಿ ಒಡಿಶಾದ ತಲಬಿರಾ-II ಕಲ್ಲಿದ್ದಲು ಬ್ಲಾಕ್ ಅನ್ನು ಹಿಂಡಾಲ್ಕೊ ಕಂಪನಿಗೆ ಹಂಚಿಕೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಪ್ರಧಾನಿಯಾಗಿದ್ದ ಡಾ. ಮನಮೋಹನ್ ಸಿಂಗ್ ಅವರೇ ಕಲ್ಲಿದ್ದಲು ಸಚಿವಾಲಯದ ಹೆಚ್ಚುವರಿ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದರು. ಈ ಹಂಚಿಕೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದಡಿ ಪ್ರಕರಣ ದಾಖಲಾಗಿತ್ತು.
ಆದರೆ ತನಿಖೆ ನಡೆಸಿದ ಸಿಬಿಐಗೆ ಅವರ ವಿರುದ್ಧ ಯಾವುದೇ ಅಪರಾಧ ಸಾಬೀತುಪಡಿಸುವ ಸಾಕ್ಷ್ಯ ದೊರೆಯಲಿಲ್ಲ. ಆದರೂ ವಿಶೇಷ ಸಿಬಿಐ ನ್ಯಾಯಾಲಯ ವಿಚಾರಣೆಗೆ ಆದೇಶ ನೀಡಿತ್ತು. ಇದೀಗ ಸುಪ್ರೀಂ ಕೋರ್ಟ್ ಆ ಆದೇಶವನ್ನು ರದ್ದುಗೊಳಿಸುವ ಮೂಲಕ ಸುಮಾರು 11 ವರ್ಷಗಳ ಕಾನೂನು ಹೋರಾಟಕ್ಕೆ ತೆರೆ ಎಳೆದಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣವಾಗಿದ್ದ ಕಲ್ಲಿದ್ದಲು ಹಂಚಿಕೆ ವಿವಾದದಲ್ಲಿ, ಡಾ. ಮನಮೋಹನ್ ಸಿಂಗ್ ಅವರ ವಿರುದ್ಧ ಉಳಿದಿದ್ದ ಪ್ರಮುಖ ಆರೋಪವೂ ಇದೀಗ ನ್ಯಾಯಾಂಗದ ಮಟ್ಟದಲ್ಲಿ ಕೊನೆಗೊಂಡಂತಾಗಿದೆ.