ಬೆಂಗಳೂರು, ಜು. 29 (DaijiworldNews/AK): ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಬರೋಬ್ಬರಿ 84,31,612 ಮತದಾರರನ್ನು ಮೊದಲ ಕರಡು ಮತದಾರರ ಪಟ್ಟಿಯಿಂದ ಹೊರಗಿಡಲು ಗುರುತಿಸಲಾಗಿದೆ.

ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಅವರು ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿಯೊಬ್ಬ ಮತದಾರರನ ಸ್ಥಳ ಮಹಜರು ಮಾಡಲಾಗಿದ್ದು, ಮೃತರ ಡೆತ್ ಸರ್ಟಿಫಿಕೇಟ್ ಸಂಗ್ರಹಿಸಿ, ಸಂಬಂಧಪಟ್ಟವರಿಂದ ಸಹಿ ಕೂಡ ಪಡೆಯಲಾಗಿದೆ. ಹೀಗಾಗಿ ಈ 84 ಲಕ್ಷಕ್ಕೂ ಅಧಿಕ ಜನರನ್ನು ಮೊದಲ ಕರಡು ಪಟ್ಟಿಯಲ್ಲಿ ಪರಿಗಣಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ ಒಟ್ಟು 1.3 ಕೋಟಿ ಮತದಾರರಿದ್ದಾರೆ. ಆದರೆ ಇದುವರೆಗೆ ಕೇವಲ 47.97 ಲಕ್ಷ ಜನ ಮಾತ್ರ ಅರ್ಜಿ ವಾಪಸ್ ಕೊಟ್ಟಿದ್ದಾರೆ. ಬರೋಬ್ಬರಿ 39.38 ಲಕ್ಷ (ಸುಮಾರು 40%) ಮತದಾರರ ಸುಳಿವೇ ಸಿಕ್ಕಿಲ್ಲ. ಇನ್ನೂ 16.57 ಲಕ್ಷ ಮತದಾರರು ಅರ್ಜಿ ವಾಪಸ್ ನೀಡಬೇಕಿದೆ ಎಂದು ಹೇಳಿದರು.
ರಾಜ್ಯದ ಎಸ್ಐಆರ್ ಸ್ಥಿತಿಗತಿ:
ವಿತರಿಸಲಾದ ಎನ್ಯೂಮರೇಷನ್ ಫಾರ್ಮ್ಗಳು: 5,54,32,314
ವಾಪಸ್ ಸ್ವೀಕರಿಸಿದ ಅರ್ಜಿಗಳು: 4.26 ಕೋಟಿ (4,26,75,861 ಡಿಜಿಟೈಸೇಷನ್ ಪೂರ್ಣ)
ಪ್ರಸ್ತುತ ಪ್ರಗತಿ: 76.99%
ಇನ್ನೂ ಮಾಹಿತಿ ಸಿಗದ ಮತದಾರರು: 43,24,841 (ಆಗಸ್ಟ್ 08ರ ನಂತರ ಇವರ ಸ್ಪಷ್ಟ ಚಿತ್ರಣ ಸಿಗಲಿದೆ)
ಆನ್ಲೈನ್ ಅರ್ಜಿಗಳು: 3.22 ಲಕ್ಷ
ಫಾರ್ಮ್ 6A ಅರ್ಜಿಗಳು: 2,283
ಫಾರ್ಮ್ 7 ಅರ್ಜಿಗಳು: 7.73 ಲಕ್ಷ
ಅರ್ಜಿ ವಾಪಸ್ ಕೊಡದೇ ಇರುವವರು ಆಗಸ್ಟ್ 8ರ ಒಳಗಾಗಿ ಬಿಎಲ್ಒ ಸಹಾಯ ಪಡೆದು ಅರ್ಜಿ ಸಲ್ಲಿಸಬೇಕು. ಸುಮಾರು 29 ಲಕ್ಷ ಮತದಾರರು ‘2002ರ ಮಾಹಿತಿ ಇಲ್ಲ’ ಎಂಬ ಕಾರಣಕ್ಕೆ ಅರ್ಜಿ ವಾಪಸ್ ಕೊಟ್ಟಿದ್ದಾರೆ. ಮಾಹಿತಿ ಇಲ್ಲದಿದ್ದರೂ ಬಿಎಲ್ಒಗಳ ನೆರವಿನಿಂದ ಅರ್ಜಿ ಸಲ್ಲಿಸಬಹುದು.
ಶಾಶ್ವತವಾಗಿ ಸ್ಥಳಾಂತರಗೊಂಡ 51.74 ಲಕ್ಷ ಮತದಾರರು ಪ್ರಸ್ತುತ ಕರ್ನಾಟಕದ ಯಾವುದೇ ಕ್ಷೇತ್ರದಲ್ಲಿ ವಾಸವಿದ್ದು, ದೇಶದ ಬೇರೆಲ್ಲೂ ಮತ ಹೊಂದಿರದಿದ್ದರೆ ಫಾರ್ಮ್-6 ಮೂಲಕ ಸೂಕ್ತ ದಾಖಲೆ ನೀಡಿ ಅರ್ಜಿ ಸಲ್ಲಿಸಬಹುದು. ಕರ್ನಾಟಕದಲ್ಲಿ ವಾಸ ಮಾಡುತ್ತಿರುವುದಕ್ಕೆ ಸೂಕ್ತವಾದ ದಾಖಲೆ ಸಲ್ಲಸಿದರೆ ಅವರ ಹೆಸರನ್ನು ಪರಿಗಣಿಸಲಾಗುತ್ತದೆ. ಇಲ್ಲವಾದರೆ ಅಂತಿಮ ಪಟ್ಟಿಯಿಂದಲೂ ಅವರನ್ನು ಹೊರಗಿಡಲಾಗುತ್ತದೆ.