ನವದೆಹಲಿ, ಜು. 29 (DaijiworldNews/AK):ರಾಷ್ಟ್ರೀಯ ಗೀತೆಯಾದ ‘ವಂದೇ ಮಾತರಂ’ಗೆ ಅವಮಾನ ಮಾಡುವುದನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸುವ ಮಹತ್ವದ ವಿಧೇಯಕವನ್ನು ರಾಜ್ಯಸಭೆ ಇಂದು ಅಂಗೀಕರಿಸಿದೆ.

ರಾಷ್ಟ್ರಗೀತೆಯಾದ ಜನಗಣಮನ ಗೀತೆಗೆ ನೀಡುವ ಗೌರವವನ್ನೇ ವಂದೇ ಮಾತರಂ ಗೀತೆಗೂ ನೀಡಬೇಕೆಂದು ಉಲ್ಲೇಖಿಸಲಾಗಿದೆ. ‘ರಾಷ್ಟ್ರೀಯ ಗೌರವಕ್ಕೆ ಅಪಮಾನ ತಡೆ (ತಿದ್ದುಪಡಿ) ವಿಧೇಯಕ – 2026’ ಅನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.
ಇಂದು ಬೆಳಗ್ಗೆ ಎರಡು ಬಾರಿ ಕಲಾಪ ಮುಂದೂಡಲ್ಪಟ್ಟ ನಂತರ, ಮಧ್ಯಾಹ್ನದ ಭೋಜನದ ಬಳಿಕ ಸದನ ಸಮಾವೇಶಗೊಳ್ಳುತ್ತಿದ್ದಂತೆ ಉಪಸಭಾಪತಿ ಹರಿವಂಶ್ ಅವರು ಪ್ರತಿಭಟನೆ ನಡೆಸುತ್ತಿದ್ದ ಸದಸ್ಯರಿಗೆ ಕಲಾಪದ ಘನತೆಯನ್ನು ಕಾಯ್ದುಕೊಳ್ಳುವಂತೆ ಮನವಿ ಮಾಡಿದರು.
ಪರಿಶೀಲನೆ ಮತ್ತು ಅಂಗೀಕಾರಕ್ಕಾಗಿ ಪಟ್ಟಿಯಾಗಿದ್ದ ಈ ವಿಧೇಯಕದ ಮೇಲಿನ ಚರ್ಚೆಯನ್ನು ಪೀಠವು ಕೈಗೆತ್ತಿಕೊಳ್ಳುತ್ತಿದ್ದಂತೆ, ವಿರೋಧ ಪಕ್ಷಗಳು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದವು ಮತ್ತು ಘೋಷಣೆಗಳನ್ನು ಕೂಗಿದವು. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ರಾಜಧಾನಿಯಲ್ಲಿ ಪ್ರತಿಭಟನೆ ನಡೆಸಿದವರ ಮೇಲಿನ ಪೊಲೀಸ್ ಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರತಿಕ್ರಿಯಿಸಬೇಕು ಎಂದು ಅವರು ಆಗ್ರಹಿಸಿದರು.
ವಿಪಕ್ಷಗಳ ಪ್ರತಿಭಟನೆಯ ನಡುವೆಯೂ ಉಪಸಭಾಪತಿ ಸದನದ ಕಲಾಪವನ್ನು ಮುಂದುವರಿಸಿದರು. ಚರ್ಚೆಯಲ್ಲಿ ಭಾಗವಹಿಸುವಂತೆ ರಾಜ್ಯಸಭಾ ಸದಸ್ಯರಲ್ಲಿ ವಿನಂತಿಸಿದರು. ಆದರೂ ವಿರೋಧ ಪಕ್ಷಗಳು ತಮ್ಮ ಬೇಡಿಕೆಯನ್ನು ಮುಂದುವರಿಸಿದವು. ನಂತರ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ರಾಮದಾಸ್ ಅಥಾವಳೆ ಅವರು ಪ್ರಸ್ತಾವಿತ ಮಸೂದೆಯ ಕುರಿತು ಮಾತನಾಡುತ್ತಿದ್ದಾಗ ವಿಪಕ್ಷಗಳ ಸಂಸದರು ಕಲಾಪದಿಂದ ಹೊರನಡೆದರು.
ವಿಧೇಯಕದ ಮೇಲಿನ ಚರ್ಚೆಗೆ ಉತ್ತರಿಸಿದ ಕೇಂದ್ರ ಗೃಹ ರಾಜ್ಯ ಸಚಿವ ನಿತ್ಯಾನಂದ ರೈ, ಕಾಂಗ್ರೆಸ್ ಪಕ್ಷವು ತುಷ್ಟೀಕರಣ ರಾಜಕಾರಣಕ್ಕೆ ಮೊರೆಹೋಗುವ ಮೂಲಕ ದೇಶದ ಗೌರವವಾದ ‘ವಂದೇ ಮಾತರಂ’ ರಾಷ್ಟ್ರಗೀತೆಯನ್ನು ಅವಮಾನಿಸಲು ಯತ್ನಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.