ನವದೆಹಲಿ, ಜು. 30 (DaijiworldNews/TA): ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಎಎಸ್ ಅಧಿಕಾರಿಯಾಗುವುದು ಲಕ್ಷಾಂತರ ಯುವಕರ ಕನಸು. ಆದರೆ ಈ ಕನಸಿನ ಹಾದಿಯಲ್ಲಿ ಎದುರಾಗುವ ವೈಫಲ್ಯಗಳು ಅನೇಕರನ್ನು ಮಧ್ಯದಲ್ಲೇ ಹಿಂತಿರುಗುವಂತೆ ಮಾಡುತ್ತವೆ. ಆದರೆ ಹರಿಯಾಣದ ಅಂಬಾಲಾದ ಅಕೃತಿ ಸೇಥಿ ಮಾತ್ರ ಸತತ ಐದು ಬಾರಿ ಪ್ರಿಲಿಮ್ಸ್ನಲ್ಲಿ ಅನುತ್ತೀರ್ಣರಾದರೂ ಹಿಮ್ಮೆಟ್ಟದೆ, ಆರನೇ ಪ್ರಯತ್ನದಲ್ಲೇ ಐಎಎಸ್ ಅಧಿಕಾರಿಯಾಗುವ ಮೂಲಕ ಅಸಾಧ್ಯವೆನಿಸಿದ್ದ ಸಾಧನೆಯನ್ನು ಮಾಡಿದ್ದಾರೆ.

ಅಕೃತಿ ಸೇಥಿ ದೆಹಲಿ ವಿಶ್ವವಿದ್ಯಾಲಯದಲ್ಲಿ ಪದವಿ ಪೂರ್ಣಗೊಳಿಸಿದ ಬಳಿಕ ಖಾಸಗಿ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿದ್ದರು. ಆರಂಭದಲ್ಲಿ ನಾಗರಿಕ ಸೇವೆಗೆ ಸೇರುವ ಯಾವುದೇ ಯೋಜನೆ ಅವರಿಗಿರಲಿಲ್ಲ. ಆದರೆ ಕುಟುಂಬದ ಸಂಬಂಧಿಕರೊಬ್ಬರೊಂದಿಗೆ ನಡೆದ ಮಾತುಕತೆಯ ನಂತರ ಯುಪಿಎಸ್ಸಿ ಪರೀಕ್ಷೆಯ ಬಗ್ಗೆ ಆಸಕ್ತಿ ಮೂಡಿತು. ಸಾರ್ವಜನಿಕ ಸೇವೆಯಲ್ಲಿ ವೃತ್ತಿಜೀವನ ಕಟ್ಟಿಕೊಳ್ಳುವ ಕನಸಿನಿಂದ ಅವರು ತಮ್ಮ ಉದ್ಯೋಗಕ್ಕೆ ರಾಜೀನಾಮೆ ನೀಡಿ ಸಂಪೂರ್ಣ ಸಮಯವನ್ನು ಯುಪಿಎಸ್ಸಿ ತಯಾರಿಗೆ ಮೀಸಲಿಟ್ಟರು.
2017ರಲ್ಲಿ ಮೊದಲ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಅಕೃತಿ ಪ್ರಿಲಿಮ್ಸ್ ಹಂತವನ್ನೇ ದಾಟಲು ಸಾಧ್ಯವಾಗಲಿಲ್ಲ. ಮೊದಲ ಸೋಲು ಅವರಿಗೆ ತೀವ್ರ ನಿರಾಸೆ ಉಂಟುಮಾಡಿದರೂ, ಅವರು ಹೋರಾಟ ನಿಲ್ಲಿಸಲಿಲ್ಲ. ನಂತರದ ನಾಲ್ಕು ಪ್ರಯತ್ನಗಳಲ್ಲಿಯೂ ಅದೇ ಪರಿಸ್ಥಿತಿ ಮರುಕಳಿಸಿತು. 2021ರ ವೇಳೆಗೆ ಅವರು ಸತತ ಐದು ಬಾರಿ ಪ್ರಾಥಮಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದರು.
ಆದರೂ ತಮ್ಮ ಕನಸನ್ನು ಕೈಬಿಡದೆ, ಪ್ರತಿಯೊಂದು ವೈಫಲ್ಯದಿಂದ ಪಾಠ ಕಲಿತು ಮುಂದುವರಿಯುವ ನಿರ್ಧಾರವನ್ನು ಅಕೃತಿ ಕೈಗೊಂಡರು. ಐದು ಸೋಲುಗಳ ನಂತರ ಅಕೃತಿ ತಮ್ಮ ಅಧ್ಯಯನ ವಿಧಾನವನ್ನು ಸಂಪೂರ್ಣವಾಗಿ ಮರುಪರಿಶೀಲಿಸಿದರು. ಹಿಂದಿನ ತಪ್ಪುಗಳನ್ನು ವಿಶ್ಲೇಷಿಸಿ, ಅಧ್ಯಯನ ಯೋಜನೆಯಲ್ಲಿ ಬದಲಾವಣೆ ಮಾಡಿ, ಹೆಚ್ಚು ಶಿಸ್ತು ಮತ್ತು ಏಕಾಗ್ರತೆಯಿಂದ ತಯಾರಿ ನಡೆಸಿದರು.
ಅದರ ಫಲವಾಗಿ, 2022ರ ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ತಮ್ಮ ಆರನೇ ಪ್ರಯತ್ನದಲ್ಲೇ ಯಶಸ್ಸು ಸಾಧಿಸಿ, ಅಖಿಲ ಭಾರತ 249ನೇ ರ್ಯಾಂಕ್ (AIR 249)ಪಡೆದು ಭಾರತೀಯ ಆಡಳಿತ ಸೇವೆ (IAS)ಗೆ ಆಯ್ಕೆಯಾದರು. ಅಕೃತಿಯ ಈ ಯಶಸ್ಸಿನ ಹಿಂದೆ ಅವರ ಕುಟುಂಬದ ಬೆಂಬಲವೂ ಮಹತ್ವದ ಪಾತ್ರ ವಹಿಸಿತು. ವಿಶೇಷವಾಗಿ ಅವರ ತಂದೆ, ಪ್ರತಿಯೊಂದು ವೈಫಲ್ಯವನ್ನೂ ಸೋಲಾಗಿ ನೋಡದೆ, ಹೊಸ ಪಾಠವಾಗಿ ಪರಿಗಣಿಸುವಂತೆ ಪ್ರೋತ್ಸಾಹಿಸಿದರು. "ಕಷ್ಟಪಟ್ಟು ಪ್ರಯತ್ನಿಸುತ್ತಲೇ ಇರು, ಯಶಸ್ಸು ಖಂಡಿತ ಸಿಗುತ್ತದೆ" ಎಂಬ ಅವರ ಪ್ರೇರಣೆ ಅಕೃತಿಗೆ ನಿರಂತರ ಧೈರ್ಯ ತುಂಬಿತು.
ಅಕೃತಿ ಸೇಥಿಯ ಸಾಧನೆ, ಯುಪಿಎಸ್ಸಿ ಸೇರಿದಂತೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳಿಗೆ ದೊಡ್ಡ ಸ್ಫೂರ್ತಿಯಾಗಿದೆ. ಸತತ ವೈಫಲ್ಯಗಳು ಬಂದರೂ ಆತ್ಮವಿಶ್ವಾಸ ಕಳೆದುಕೊಳ್ಳದೆ, ತಪ್ಪುಗಳನ್ನು ತಿದ್ದಿಕೊಂಡು ನಿರಂತರ ಪರಿಶ್ರಮ ಪಟ್ಟರೆ ಯಶಸ್ಸು ಖಂಡಿತ ಸಿಗುತ್ತದೆ ಎಂಬುದನ್ನು ಅವರ ಜೀವನಯಾನ ಸಾಬೀತುಪಡಿಸಿದೆ.