ನವದೆಹಲಿ, ಜು. 30 (DaijiworldNews/TA): ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಫೇಸ್ಬುಕ್ ಖಾತೆಯಲ್ಲಿದ್ದ ವಿಡಿಯೊವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೆಟಾ ಸಂಸ್ಥೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ವಿಷಾದ ವ್ಯಕ್ತಪಡಿಸಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಉನ್ನತ ಮಟ್ಟದ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರುವ ಭರವಸೆ ನೀಡಿದೆ.

ಜುಲೈ 23ರಂದು ಪರೀಕ್ಷಾ ಪತ್ರಿಕೆ ಸೋರಿಕೆ ವಿರೋಧಿಸಿ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆಯ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ‘ಜೆನ್ ಝಿ’ ಯುವಕರನ್ನು ಉದ್ದೇಶಿಸಿ ಪರೀಕ್ಷಾ ಅಕ್ರಮಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ನೀಡಿದ್ದ ಸಂದೇಶದ ವಿಡಿಯೊವನ್ನು ಫೇಸ್ಬುಕ್ನಲ್ಲಿ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿತ್ತು. ಈ ಬೆಳವಣಿಗೆ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದು, ಮೆಟಾ ಸಂಸ್ಥೆಯಿಂದ ತಕ್ಷಣವೇ ಸ್ಪಷ್ಟನೆ ಕೇಳಲಾಗಿತ್ತು.
ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ಪತ್ರದಲ್ಲಿ, ಪ್ರಧಾನಿ ಮೋದಿ ಸೇರಿದಂತೆ ದೇಶದ ಪ್ರಮುಖ ವಿವಿಐಪಿ ಖಾತೆಗಳ ಪೋಸ್ಟ್ಗಳಿಗೆ ಹೆಚ್ಚುವರಿ ಭದ್ರತೆ ಹಾಗೂ ಪ್ರತ್ಯೇಕ ಮೇಲ್ವಿಚಾರಣಾ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು ಎಂದು ಮೆಟಾ ತಿಳಿಸಿದೆ. ಇನ್ನು ಮುಂದೆ ಇಂತಹ ಪ್ರಮುಖ ಖಾತೆಗಳ ಯಾವುದೇ ಪೋಸ್ಟ್ ಅಥವಾ ವಿಷಯವನ್ನು ನಿರ್ಬಂಧಿಸುವ ಮೊದಲು ಮೆಟಾ ಸಂಸ್ಥೆಯ ಕನಿಷ್ಠ ಇಬ್ಬರು ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸುವ ವ್ಯವಸ್ಥೆ ರೂಪಿಸಲಾಗುವುದು ಎಂದು ಭರವಸೆ ನೀಡಿದೆ.
ಈ ಕುರಿತು ಸ್ಪಷ್ಟನೆ ನೀಡಿರುವ ಮೆಟಾ, ಕೃತಕ ಬುದ್ಧಿಮತ್ತೆ (AI) ಆಧಾರಿತ ಕಂಟೆಂಟ್ ಮಾಡರೇಶನ್ ವ್ಯವಸ್ಥೆಯಲ್ಲಿನ ತಾಂತ್ರಿಕ ದೋಷದಿಂದ ವಿಡಿಯೊ ತಾತ್ಕಾಲಿಕವಾಗಿ ಬ್ಲಾಕ್ ಆಗಿತ್ತು ಎಂದು ಹೇಳಿದೆ. ಜೊತೆಗೆ, ಇಂತಹ ದೋಷಗಳು ಮರುಕಳಿಸದಂತೆ ಎಐ ವ್ಯವಸ್ಥೆಯಲ್ಲಿ ಅಗತ್ಯ ತಾಂತ್ರಿಕ ಸುಧಾರಣೆಗಳನ್ನು ಕೈಗೊಳ್ಳುವುದಾಗಿ ತಿಳಿಸಿದೆ.
ಆದರೆ ಮೆಟಾ ನೀಡಿರುವ ಈ ವಿವರಣೆಯಿಂದ ಕೇಂದ್ರ ಸರ್ಕಾರ ತೃಪ್ತಿಯಾಗಿಲ್ಲ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮೆಟಾದ ಕ್ಷಮೆಯಾಚನೆಯನ್ನು ಸ್ವೀಕರಿಸಿದರೂ, ತಾಂತ್ರಿಕ ದೋಷ ಎಂಬ ಕಾರಣವನ್ನು ಸಮರ್ಪಕ ಉತ್ತರವೆಂದು ಪರಿಗಣಿಸಿಲ್ಲ. ಈ ಕುರಿತು ಪ್ರತಿಕ್ರಿಯಿಸಿರುವ ಐಟಿ ಕಾರ್ಯದರ್ಶಿ ಎಸ್. ಕೃಷ್ಣನ್, "ಮೆಟಾ ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿದೆ. ಆದರೆ ಅವರು ನೀಡಿರುವ ಕಾರಣ ನಮಗೆ ತೃಪ್ತಿ ತಂದಿಲ್ಲ. ದೇಶದ ಪ್ರಧಾನಿಯವರ ಅಧಿಕೃತ ಖಾತೆಯ ಪೋಸ್ಟ್ಗೇ ಈ ರೀತಿ ಆಗಿದ್ದರೆ, ಎಐ ವ್ಯವಸ್ಥೆಯ ವಿಶ್ವಾಸಾರ್ಹತೆ ಎಲ್ಲಿದೆ?" ಎಂದು ಪ್ರಶ್ನಿಸಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಮೆಟಾ ಹಾಗೂ ಇನ್ಸ್ಟಾಗ್ರಾಮ್ನ ಜಾಗತಿಕ ಮುಖ್ಯಸ್ಥರಿಗೆ ಮುಖಾಮುಖಿ ವಿಚಾರಣೆಗೆ ಸಮನ್ಸ್ ಜಾರಿ ಮಾಡಿದ್ದು, ಈ ವಾರದ ಕೊನೆಯಲ್ಲಿ ಉನ್ನತ ಮಟ್ಟದ ಸಭೆ ನಡೆಯುವ ಸಾಧ್ಯತೆ ಇದೆ. ಭಾರತದ ನೂತನ ಮಾಹಿತಿ ತಂತ್ರಜ್ಞಾನ ನಿಯಮಗಳ ಪ್ರಕಾರ, ದೇಶದ ಸಾಂವಿಧಾನಿಕ ಹುದ್ದೆಯಲ್ಲಿರುವವರ ಅಧಿಕೃತ ಖಾತೆಗಳು ಅಥವಾ ಸರ್ಕಾರದ ಅಧಿಕೃತ ಮಾಹಿತಿಯನ್ನು ಸಮರ್ಪಕ ಕಾರಣವಿಲ್ಲದೆ ನಿರ್ಬಂಧಿಸುವುದು ಕಾನೂನುಬಾಹಿರವಾಗಿದೆ. ಈ ಹಿನ್ನೆಲೆಯಲ್ಲಿ ಘಟನೆಗೆ ಸಂಬಂಧಿಸಿದಂತೆ ಸರ್ಕಾರ ಕಟ್ಟುನಿಟ್ಟಿನ ನಿಲುವು ತಳೆದಿದೆ.
ಸಾಮಾಜಿಕ ಜಾಲತಾಣ ಸಂಸ್ಥೆಗಳು ಕಂಟೆಂಟ್ ಮಾಡರೇಶನ್ ಪ್ರಕ್ರಿಯೆಯಲ್ಲಿ ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ ಮೇಲೆ ಅವಲಂಬಿತವಾಗಿರುವುದರಿಂದ ಉಂಟಾಗಬಹುದಾದ ಅಪಾಯಗಳ ಬಗ್ಗೆ ಈ ಘಟನೆ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದ್ದು, ಸೂಕ್ಷ್ಮ ಹಾಗೂ ಮಹತ್ವದ ವಿಷಯಗಳಲ್ಲಿ ಮಾನವ ಮೇಲ್ವಿಚಾರಣೆಯ ಅಗತ್ಯವನ್ನು ತಜ್ಞರು ಒತ್ತಿ ಹೇಳಿದ್ದಾರೆ.