ನವದೆಹಲಿ, ಜು. 30 (DaijiworldNews/TA): ಅಪ್ಪ ಎಂಬ ಪದ ಕೇವಲ ಒಂದು ಸಂಬಂಧದ ಸೂಚಕವಲ್ಲ, ಅದು ಧೈರ್ಯ, ತ್ಯಾಗ, ರಕ್ಷಣೆ ಮತ್ತು ನಿಸ್ವಾರ್ಥ ಪ್ರೀತಿಯ ಮತ್ತೊಂದು ಹೆಸರು. ತನ್ನ ಕನಸುಗಳನ್ನು ಬದಿಗೊತ್ತಿ, ಮಕ್ಕಳ ಭವಿಷ್ಯಕ್ಕಾಗಿ ಬದುಕುವ ಅಪ್ಪ, ಕೊನೆಯ ಕ್ಷಣದಲ್ಲೂ ತನ್ನ ಕುಟುಂಬದ ಬಗ್ಗೆ ಮಾತ್ರ ಯೋಚಿಸುತ್ತಾನೆ. ಅಂತಹ ಹೃದಯವಿದ್ರಾವಕ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕ್ಯಾನ್ಸರ್ನಿಂದ ಸಾವಿನ ಅಂಚಿನಲ್ಲಿದ್ದ ತಂದೆಯೊಬ್ಬರು ತನ್ನ ಪುಟ್ಟ ಮಗನಿಗೆ ಹೇಳಿದ ಕೊನೆಯ ಮಾತುಗಳು ಲಕ್ಷಾಂತರ ಜನರ ಕಣ್ಣಲ್ಲಿ ನೀರು ತರಿಸಿವೆ.

ಕ್ಯಾನ್ಸರ್ನಿಂದ ಬದುಕಿನ ಕೊನೆಯ ಕ್ಷಣಗಳನ್ನು ಎದುರಿಸುತ್ತಿದ್ದ ತಂದೆಯೊಬ್ಬರು ತನ್ನ ಪುಟ್ಟ ಮಗನಿಗೆ ನೀಡಿದ ಕೊನೆಯ ಸಂದೇಶದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ಮಂದಿಯ ಮನಸ್ಸು ಮುಟ್ಟಿದೆ. ಭಾವುಕ ಕ್ಷಣಗಳನ್ನು ಸೆರೆಹಿಡಿದ ಈ ವೀಡಿಯೊವನ್ನು ‘ವೋಕ್ ಎಮಿನೆಂಟ್’ ಎಂಬ ಎಕ್ಸ್ ಖಾತೆ ಹಂಚಿಕೊಂಡಿದ್ದು, ನೆಟ್ಟಿಗರನ್ನು ಕಣ್ಣೀರಿಡುವಂತೆ ಮಾಡಿದೆ.
ವೀಡಿಯೊದಲ್ಲಿ ಮಾಸ್ಕ್ ಧರಿಸಿರುವ ತಂದೆ, ತನ್ನ ಸಾವು ಸಮೀಪದಲ್ಲಿದೆ ಎಂಬ ಅರಿವಿದ್ದರೂ ಅತೀವ ಶಾಂತಚಿತ್ತದಿಂದ ತನ್ನ ಪುಟ್ಟ ಮಗ ‘ಮಂತ್ರ’ನಿಗೆ ಜೀವನದ ಪಾಠ ಹೇಳುತ್ತಿರುವುದು ಕಾಣಿಸುತ್ತದೆ. ತನ್ನ ಅಗಲಿಕೆಯ ಆಘಾತ ಮಗನ ಮನಸ್ಸಿನ ಮೇಲೆ ಬೀಳಬಾರದು ಎಂಬ ಉದ್ದೇಶದಿಂದ, ಪ್ರೀತಿಯಿಂದ ಧೈರ್ಯ ತುಂಬುತ್ತಾ, ಕುಟುಂಬದ ಜವಾಬ್ದಾರಿಯನ್ನು ನೆನಪಿಸುತ್ತಾರೆ.
“ಮಂತ್ರ, ನಾನು ನಿನ್ನನ್ನು ಬಿಟ್ಟು ದೂರ ಹೋದರೆ ಅಮ್ಮನ ಮಾತು ಕೇಳು. ಹಠ ಮಾಡಬೇಡ. ನಿನ್ನ ಅಮ್ಮ ಮತ್ತು ಇಬ್ಬರು ಅಕ್ಕಂದಿರನ್ನು ಚೆನ್ನಾಗಿ ನೋಡಿಕೋ. ‘ಅಪ್ಪ ಎಲ್ಲಿಗೆ ಹೋದರು?’ ಎಂದು ಯಾವತ್ತೂ ಕೇಳಬೇಡ. ನೀನು ನನ್ನನ್ನು ನೆನಪಿಸಿಕೊಂಡಾಗಲೆಲ್ಲಾ ನಾನು ನಿನ್ನ ಸುತ್ತಲೂ ಇರುತ್ತೇನೆ” ಎಂದು ತಂದೆ ಮಗನಿಗೆ ಹೇಳುವ ದೃಶ್ಯ ನೋಡುಗರ ಮನಸ್ಸನ್ನು ಕಲಕುವಂತಿದೆ. ತಂದೆಯ ಮಾತಿನ ಅರ್ಥವೂ ಸಂಪೂರ್ಣವಾಗಿ ತಿಳಿಯದ ಮುಗ್ಧ ಮಗುವಿನ ಮುಖಭಾವ, ವೀಡಿಯೊವನ್ನು ಇನ್ನಷ್ಟು ಭಾವುಕವಾಗಿಸಿದೆ. ತನ್ನ ನೋವನ್ನು ಮರೆಮಾಚಿ, ಮಗನ ಭವಿಷ್ಯದ ಬಗ್ಗೆ ಚಿಂತಿಸುತ್ತಾ ಧೈರ್ಯ ತುಂಬುತ್ತಿರುವ ತಂದೆಯ ಪ್ರೀತಿ ಅನೇಕರ ಕಣ್ಣೀರಿಗೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವೀಡಿಯೊಗೆ ಸಾವಿರಾರು ಮಂದಿ ಭಾವುಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. “ಯಾವ ಕುಟುಂಬಕ್ಕೂ ಇಂತಹ ನೋವು ಬರಬಾರದು”, “ಮಗನನ್ನು ತಾನ್ನಿಲ್ಲದ ಬದುಕಿಗೆ ಸಿದ್ಧಪಡಿಸುವುದು ತಂದೆಗೆ ಎಷ್ಟು ಕಷ್ಟವಾಗಿರಬಹುದು”, “ಆ ಕುಟುಂಬಕ್ಕೆ ಈ ದುಃಖವನ್ನು ಎದುರಿಸುವ ಶಕ್ತಿ ಸಿಗಲಿ” ಎಂದು ನೆಟ್ಟಿಗರು ಪ್ರಾರ್ಥಿಸಿದ್ದಾರೆ.
ಈ ಘಟನೆ ಕೇವಲ ಒಂದು ಕುಟುಂಬದ ವೈಯಕ್ತಿಕ ದುಃಖವಷ್ಟೇ ಅಲ್ಲ, ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಮತ್ತು ಅವರ ಕುಟುಂಬಗಳಿಗೆ ಮಾನಸಿಕ ಹಾಗೂ ಭಾವನಾತ್ಮಕ ಬೆಂಬಲ ಎಷ್ಟು ಅಗತ್ಯ ಎಂಬುದನ್ನೂ ಸಮಾಜಕ್ಕೆ ನೆನಪಿಸುತ್ತದೆ. ಬದುಕಿನ ಕೊನೆಯ ಕ್ಷಣಗಳಲ್ಲಿ ಪ್ರೀತಿಪಾತ್ರರೊಂದಿಗೆ ಕಳೆಯುವ ಪ್ರತಿಯೊಂದು ಕ್ಷಣವೂ ಎಷ್ಟು ಅಮೂಲ್ಯ ಎಂಬುದನ್ನು ಈ ವೀಡಿಯೊ ಮನದಟ್ಟುಗೊಳಿಸಿದೆ.