ಕೇರಳ, ಜು. 31 (DaijiworldNews/AK): ದೃಢ ಸಂಕಲ್ಪ ಮತ್ತು ಸತತ ಶ್ರಮವಿದ್ದರೆ ಎಂತಹ ದೊಡ್ಡ ಸವಾಲನ್ನಾದರೂ ಮೆಟ್ಟಿ ನಿಂತು ಗುರಿ ಸಾಧಿಸಬಹುದು ಎಂಬುದಕ್ಕೆ ಕೇರಳ ಮೂಲದ ಐಎಎಸ್ ಅಧಿಕಾರಿ ಮಿನ್ನು ಪಿ.ಎಂ. ಜೋಶಿ ಅವರ ಜೀವನವೇ ಜೀವಂತ ಸಾಕ್ಷಿ.

ವಯಸ್ಸು, ಕುಟುಂಬದ ಜವಾಬ್ದಾರಿ, ಮದುವೆ ಹಾಗೂ ಮಾತೃತ್ವದಂತಹ ಕರ್ತವ್ಯಗಳ ನಡುವೆಯೂ ತಮ್ಮ ಬಾಲ್ಯದ ಕನಸನ್ನು ಬೆನ್ನಟ್ಟಿ, 6ನೇ ಪ್ರಯತ್ನದಲ್ಲಿ ಅಖಿಲ ಭಾರತ ಮಟ್ಟದಲ್ಲಿ 150ನೇ ರ್ಯಾಂಕ್ ಪಡೆಯುವ ಮೂಲಕ ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ ವಿಜಯಪತಾಕೆ ಹಾರಿಸಿದ್ದಾರೆ.
ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಮಿನ್ನು ಅವರಿಗೆ ಜೀವನದಲ್ಲಿ ಎದುರಾದ ಸಂಕಷ್ಟಗಳು ಸಣ್ಣದೇನಲ್ಲ. ತಂದೆಯ ಅಗಲಿಕೆಯ ನೋವಿದ್ದರೂ, ಅವರ ಕನಸನ್ನು ಹೃದಯದಲ್ಲೇ
ಭದ್ರವಾಗಿ ಉಳಿಸಿಕೊಂಡು ಬೆಳೆದರು. ಉದ್ಯೋಗ ಗಿಟ್ಟಿಸಿಕೊಂಡ ಮೇಲೂ ಓದನ್ನು ನಿಲ್ಲಿಸದೆ ಉದ್ಯೋಗದ ಜೊತೆಗೇ ಸ್ನಾತಕೋತ್ತರ ಪದವಿಯನ್ನೂ ಪೂರ್ಣಗೊಳಿಸಿದರು.
ಕೇರಳ ಪೊಲೀಸ್ ಇಲಾಖೆಯಲ್ಲಿ ಕ್ಲರ್ಕ್ ಆಗಿ ಸೇವೆಯಲ್ಲಿದ್ದ ಅವರು, ಸಂಸಾರ ಹಾಗೂ ಮಗುವಿನ ಆರೈಕೆಯ ಸವಾಲಿನ ನಡುವೆಯೂ ಕಠಿಣ ವೇಳಾಪಟ್ಟಿಯನ್ನು ಅಳವಡಿಸಿಕೊಂಡಿದ್ದರು. ಮುಂಜಾನೆ ಪತ್ರಿಕೆ ಓದು, ಹಗಲಿನಲ್ಲಿ ಕಚೇರಿಯ ಜವಾಬ್ದಾರಿ ಹಾಗೂ ರಾತ್ರಿಯ ವೇಳೆಯಲ್ಲಿ ಅಧ್ಯಯನದ ಜೊತೆಗೆ ಮಗುವಿನ ಆರೈಕೆ—ಇದೇ ಅವರ ದಿನಚರಿಯಾಗಿತ್ತು.
ಐದು ಬಾರಿ ಸತತವಾಗಿ ವಿಫಲರಾದರೂ ಧೃತಿಗೆಡದ ಮಿನ್ನು, ತಮ್ಮ 32ನೇ ವಯಸ್ಸಿನಲ್ಲಿ 6ನೇ ಹಾಗೂ ಅಂತಿಮ ಯತ್ನದಲ್ಲಿ ಯುಪಿಎಸ್ಸಿ ಮೆಟ್ಟಿಲೇರಿ ಸಾಧನೆ ಮಾಡಿದರು. ಪ್ರಸ್ತುತ ಮಹಾರಾಷ್ಟ್ರ ಕೆಡರ್ನಲ್ಲಿ ಅಸಿಸ್ಟೆಂಟ್ ಕಲೆಕ್ಟರ್ ಆಗಿ ದೇಶಸೇವೆ ಸಲ್ಲಿಸುತ್ತಿರುವ ಮಿನ್ನು ಜೋಶಿ ಅವರ ಈ ಯಶೋಗಾಥೆ, ನಿರಂತರ ಪ್ರಯತ್ನವೇ ಗೆಲುವಿನ ದಾರಿ' ಎಂಬುದನ್ನು ಸಾಬೀತುಪಡಿಸಿದ್ದು, ನಾಡಿನ ಸಾವಿರಾರು ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಹಾಗೂ ಯುವಜನತೆಗೆ ದಾರಿದೀಪವಾಗಿದೆ.