ಬೆಂಗಳೂರು/ಧಾರವಾಡ, ಜು. 29 (DaijiworldNews/AK): ಜಿಲ್ಲಾ ಪಂಚಾಯತ್ ಸದಸ್ಯ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಕೇಸಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಬಿಗ್ ರಿಲೀಫ್ ಸಿಕ್ಕಿದೆ. ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿರುವ ಹೈಕೋರ್ಟ್ ವಿಭಾಗೀಯ ಪೀಠ, ಜೀವಾವಧಿ ಶಿಕ್ಷೆಯನ್ನೂ ಅಮಾನತ್ತಿನಲ್ಲಿಟ್ಟಿದೆ.

ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ಶಿಕ್ಷೆ ಅಮಾನತ್ತಿನಲ್ಲಿ ಇರಿಸಿ ಜಾಮೀನು ನೀಡುವಂತೆ ಕೋರಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ಜೀವಾವಧಿ ಶಿಕ್ಷೆಗೆ ತಡೆಯಾಜ್ಞೆ ನೀಡಿ, ವಿನಯ್ ಕುಲಕರ್ಣಿ ಹಾಗೂ ಚೆನ್ನಕೇಶವ ಟಿಂಕರಿಕ್ಗೆ ಜಾಮೀನು ಮಂಜೂರು ಮಾಡಿದೆ.
ಇಬ್ಬರ ಶ್ಯೂರಿಟಿ, 5 ಲಕ್ಷ ರೂ. ಬಾಂಡ್ಗೆ ಕೋರ್ಟ್ಗೆ ಸೂಚಿಸಿದೆ. ಈ ಮೂಲಕ ಶಾಸಕ ಸ್ಥಾನ ಊರ್ಜಿತವಾಗಿದೆ. ಇದೇ ವೇಳೆ ಕೋರ್ಟ್, ಪಾಸ್ಪೋರ್ಟ್ನ್ನು ಸೆಷನ್ಸ್ ಕೋರ್ಟ್ಗೆ ನೀಡುವಂತೆ ತಿಳಿಸಿ, ದೇಶ ತೊರೆಯದಂತೆ ಸೂಚಿಸಿದೆ.
2016ರ ಜೂನ್ 15ರಂದು ಧಾರವಾಡದಲ್ಲಿ ಬಿಜೆಪಿ ಮುಖಂಡ ಯೋಗೀಶ್ ಗೌಡ ಹತ್ಯೆ ನಡೆದಿತ್ತು. ಈ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ವಿರುದ್ಧ ಗಂಭೀರ ಆರೋಪ ಕೇಳಿಬಂದಿತ್ತು. ನಂತರ ಪ್ರಕರಣದ ತನಿಖೆಯನ್ನು ಬಳಿಕ ಸಿಬಿಐಗೆ ವಹಿಸಲಾಗಿದ್ದು, ತನಿಖೆ ನಡೆದಿತ್ತು. ಈ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಕೊಲೆ ಮತ್ತು ಕ್ರಿಮಿನಲ್ ಸಂಚು ಆರೋಪಗಳು ಸಾಬೀತಾಗಿವೆ ಎಂದು ಬೆಂಗಳೂರಿನ ವಿಶೇಷ ನ್ಯಾಯಾಲಯ 2026ರ ಏಪ್ರಿಲ್ 17ರಂದು ತೀರ್ಪು ನೀಡಿ, ಜೀವಾವಧಿ ಶಿಕ್ಷೆ ವಿಧಿಸಿತ್ತು. ಸಾಕ್ಷ್ಯ ನಾಶಕ್ಕೆ ಸಂಬಂಧಿಸಿದಂತೆ 7 ವರ್ಷಗಳ ಜೈಲು ಶಿಕ್ಷೆ ಹಾಗೂ 30 ಸಾವಿರ ರೂ. ದಂಡವನ್ನೂ ವಿಧಿಸಿತ್ತು. ದಂಡದ ಮೊತ್ತದಿಂದ ಸಂತ್ರಸ್ತ ಯೋಗೀಶ್ ಗೌಡ ಅವರ ಮಕ್ಕಳು ಮತ್ತು ಸಹೋದರರಿಗೆ ಒಟ್ಟು 16 ಲಕ್ಷ ರೂ. ಪರಿಹಾರ ನೀಡಲು ಆದೇಶಿಸಲಾಗಿತ್ತು.
ಶಿಕ್ಷೆ ಪ್ರಕಟವಾದ ಬಳಿಕ ವಿನಯ್ ಕುಲಕರ್ಣಿ ಅವರ ಶಾಸಕ ಸ್ಥಾನ ಅನರ್ಹಗೊಂಡಿತ್ತು. ಆದರೆ, ತೀರ್ಪನ್ನು ಪ್ರಶ್ನಿಸಿ ವಿನಯ್ ಕುಲಕರ್ಣಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಹೈಕೋರ್ಟ್ ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನು ನೀಡಿರುವುದರಿಂದ, ಅವರ ಶಾಸಕ ಸ್ಥಾನಕ್ಕೆ ಮತ್ತೆ ಅವಕಾಶ ದೊರೆಯುವ ಸಾಧ್ಯತೆ ಇದೆ.