ನವದೆಹಲಿ, ಜು. 29 (DaijiworldNews/AK):ರೈಲ್ವೆ ಗ್ರೂಪ್ ಡಿ ನೇಮಕಾತಿಗೆ ರೈಲ್ವೆ ಮಂಡಳಿಯು ಕಂಪ್ಯೂಟರ್ ಆಧಾರಿತ ಪರೀಕ್ಷೆಯ ವೇಳಾಪಟ್ಟಿಯನ್ನು ಪರಿಷ್ಕರಿಸಿದ್ದು, ಪರೀಕ್ಷಾ ಅವಧಿಯನ್ನು ಮತ್ತಷ್ಟು ವಿಸ್ತರಿಸಿದೆ. ಈ ಬೃಹತ್ ನೇಮಕಾತಿ ಅಭಿಯಾನದ ಮೂಲಕ ರೈಲ್ವೆಯಲ್ಲಿ ಖಾಲಿ ಇರುವ ಒಟ್ಟು 22,195 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಮೂಲ ವೇಳಾಪಟ್ಟಿಯ ಪ್ರಕಾರ ಈ CBT ಪರೀಕ್ಷೆಯು ಆಗಸ್ಟ್ 3 ರಿಂದ ಆಗಸ್ಟ್ 21 ರವರೆಗೆ ನಡೆಯಬೇಕಿತ್ತು. ಆದರೆ ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಈಗ ಪರೀಕ್ಷಾ ದಿನಾಂಕಗಳನ್ನು ಆಗಸ್ಟ್ 25 ರವರೆಗೆ ವಿಸ್ತರಿಸಲಾಗಿದೆ. ಹೊಸ ವೇಳಾಪಟ್ಟಿಯಂತೆ ಪರೀಕ್ಷೆಯನ್ನು ಒಟ್ಟು 16 ದಿನಗಳಲ್ಲಿ ಹಂತ ಹಂತವಾಗಿ ನಡೆಸಲಾಗುತ್ತದೆ. ಮೊದಲ ಹಂತದ ಪರೀಕ್ಷೆಗಳು ಆಗಸ್ಟ್ 3 ರಿಂದ 6 ರವರೆಗೆ, ಎರಡನೇ ಹಂತ ಆಗಸ್ಟ್ 9 ರಿಂದ 14 ರವರೆಗೆ, ಮೂರನೇ ಹಂತ ಆಗಸ್ಟ್ 17 ರಿಂದ 21 ರವರೆಗೆ ಮತ್ತು ಅಂತಿಮ ಹಂತದ ಪರೀಕ್ಷೆಗಳು ಆಗಸ್ಟ್ 25 ರವರೆಗೆ ನಡೆಯಲಿವೆ.
ಅಭ್ಯರ್ಥಿಗಳಿಗೆ ತಮ್ಮ ಪರೀಕ್ಷಾ ಕೇಂದ್ರ ಮತ್ತು ದಿನಾಂಕ ತಿಳಿಯಲು ಅನುಕೂಲವಾಗುವಂತೆ ಪರೀಕ್ಷಾ ದಿನಾಂಕದ 10 ದಿನಗಳ ಮೊದಲು ಪರೀಕ್ಷಾ ನಗರದ ಮಾಹಿತಿ ಮತ್ತು ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ ಉಚಿತ ಪ್ರಯಾಣ ಪ್ರಾಧಿಕಾರದ ಲಿಂಕ್ ಅನ್ನು ಆಯಾ RRB ಅಧಿಕೃತ ವೆಬ್ಸೈಟ್ಗಳಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ. ಇನ್ನು ಪರೀಕ್ಷೆಗೆ ಹಾಜರಾಗಲು ಅಗತ್ಯವಿರುವ ಮುಖ್ಯ ಇ-ಪ್ರವೇಶ ಪತ್ರಗಳನ್ನು ಪರೀಕ್ಷೆಗೆ ಸರಿಯಾಗಿ 4 ದಿನಗಳ ಮೊದಲು ಬಿಡುಗಡೆ ಮಾಡಲಾಗುತ್ತದೆ. ಉದಾಹರಣೆಗೆ, ಆಗಸ್ಟ್ 3 ರಂದು ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಜುಲೈ 31 ರಿಂದ ತಮ್ಮ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ರೈಲ್ವೆ ಗ್ರೂಪ್ ಡಿ CBT ಪರೀಕ್ಷೆಯು ಒಟ್ಟು 90 ನಿಮಿಷಗಳ (1.5 ಗಂಟೆ) ಅವಧಿಯದ್ದಾಗಿದ್ದು, 100 ಬಹು ಆಯ್ಕೆಯ (MCQ) ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ವಿಷಯವಾರು ಅಂಕಗಳ ವಿಂಗಡಣೆಯನ್ನು ನೋಡುವುದಾದರೆ, ಸಾಮಾನ್ಯ ಬುದ್ಧಿಮತ್ತೆ ಮತ್ತು ತಾರ್ಕಿಕತೆಯಿಂದ 30 ಪ್ರಶ್ನೆಗಳು, ಗಣಿತ ಮತ್ತು ಸಾಮಾನ್ಯ ವಿಜ್ಞಾನದಿಂದ ತಲಾ 25 ಪ್ರಶ್ನೆಗಳು ಹಾಗೂ ಸಾಮಾನ್ಯ ಅರಿವು ಮತ್ತು ಪ್ರಚಲಿತ ವಿದ್ಯಮಾನಗಳಿಂದ 20 ಪ್ರಶ್ನೆಗಳನ್ನು ಕೇಳಲಾಗುತ್ತದೆ.
ಈ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಉತ್ತರ ನೀಡುವಾಗ ಹೆಚ್ಚಿನ ಎಚ್ಚರ ವಹಿಸುವುದು ಅಗತ್ಯವಾಗಿದೆ. ಏಕೆಂದರೆ ಪ್ರತಿ ತಪ್ಪು ಉತ್ತರಕ್ಕೂ ಮೂರನೇ ಒಂದು ಭಾಗ ಋಣಾತ್ಮಕ ಅಂಕಗಳನ್ನು ಕಳೆಯಲಾಗುತ್ತದೆ. ಅಂತಿಮವಾಗಿ ಅಭ್ಯರ್ಥಿಗಳ ಪರೀಕ್ಷಾ ಅಂಕಗಳನ್ನು ವಿವಿಧ ಹಂತಗಳ ಪರೀಕ್ಷಾ ಕಠಿಣತೆಯನ್ನು ಸರಿದೂಗಿಸಲು ‘ಸಾಮಾನ್ಯೀಕರಣ’ ವಿಧಾನದ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ.