ಹೈದರಾಬಾದ್, ಜು. 31 (DaijiworldNews/AA): ದೆಹಲಿ ಜಂತರ್ ಮಂತರ್ನಲ್ಲಿ ಕಾಕ್ರೋಚ್ ಜನತಾ ಪಕ್ಷ ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಮೆಟಾ ಇಂಡಿಯಾ ಮುಖ್ಯಸ್ಥರು ಸೇರಿದಂತೆ ಹಲವಾರು ಸಾಮಾಹಿಕ ಜಾಲತಾಣಗಳ ಖಾತೆಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪ್ರತಿಭಟನೆ ವೇಳೆ ಸಾಮಾಜಿಕ ಮಾಧ್ಯಮಗಳಲ್ಲಿ ಮೋದಿಯವರ ಮಾರ್ಫ್ ಮಾಡಿದ ಮತ್ತು ಆಕ್ಷೇಪಾರ್ಹ ಎಐ ವಿಡಿಯೋಗಳು, ಫೋಟೋಗಳನ್ನು ಹಂಚಿಕೊಳ್ಳಲಾಗಿತ್ತು. ಇದರಲ್ಲಿ ಆಕ್ರಮಣಕಾರಿ ಭಾಷೆ, ಅಪಹಾಸ್ಯ ಮತ್ತು ಅಸಭ್ಯ ಹೇಳಿಕೆಗಳನ್ನು ಬಳಸಲಾಗಿದೆ. ಇದರಿಂದ ಜನರಿಗೆ ತಪ್ಪು ಸಂದೇಶ ರವಾನೆಯಾಗಿ, ಆಕ್ರಮಣಕಾರಿ ವರ್ತನೆಗೆ ಪ್ರೋತ್ಸಾಹ ಸಿಕ್ಕಂತಾಗುತ್ತದೆ. ಇದು ಸಮಾಜದಲ್ಲಿ ಅಶಾಂತಿಗೆ ಕಾರಣ ಆಗಲಿದೆ ಎಂದು ಆರೋಪಿಸಿ ಉದ್ಯಮಿ ಎಸ್ ಅರವಿಂದ್ ರೆಡ್ಡಿ ಮತ್ತು ತೆಲಂಗಾಣ ಬಿಜೆಪಿ ಕಾರ್ಯಕರ್ತ ಟಿ ಸಾಯಿಕಿರಣ್ ಗೌಡ ಅವರು ಕೆಲ ಸಾಮಾಜಿಕ ಜಾಲತಾಣ ಖಾತೆಗಳ ವಿರುದ್ಧ ದೂರು ದಾಖಲಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಎಂದು ತೋರುವ ಹಾಗೂ ದೇಶದ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ಉಂಟುಮಾಡುವ ರೀತಿಯ ರೀಲ್ಸ್ ಮತ್ತು ಪೋಸ್ಟ್ಗಳನ್ನು ಹಂಚಿಕೊಳ್ಳಲಾಗಿದೆ. ಹೀಗಾಗಿ ಇನ್ಸ್ಟಾಗ್ರಾಂ ಮತ್ತು ಫೇಸ್ಬುಕ್ನ 20 ರೀಲ್ಸ್ ಮತ್ತು ಪೋಸ್ಟ್ಗಳ ಯುಆರ್ಎಲ್ಗಳನ್ನು ಪೊಲೀಸರಿಗೆ ಸಲ್ಲಿಸಿ ತನಿಖೆ ನಡೆಸುವಂತೆ ದೂರುದಾರರು ಮನವಿ ಮಾಡಿದ್ದಾರೆ.
ಈ ಸಂಬಂಧ ಹೈದರಾಬಾದ್ ಸೈಬರ್ ಕ್ರೈಮ್ ಪೊಲೀಸರು ಮೆಟಾದ ಭಾರತದ ಮುಖ್ಯಸ್ಥರಾದ ಅರುಣ್ ಶ್ರೀನಿವಾಸ್ ಮತ್ತು ಹಲವಾರು ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಮ್ ಖಾತೆಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. ಈ ರೀತಿ ಪೋಸ್ಟ್ ಹಂಚಿಕೊಂಡ ಖಾತೆಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.