ಕೋಲ್ಕತ್ತಾ, ಜು. 31 (DaijiworldNews/AA): ಪಶ್ಚಿಮ ಬಂಗಾಳದ ಬರ್ಧಮಾನ್ನಲ್ಲಿ ಭಯೋತ್ಪಾದನಾ ವಿರೋಧಿ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ 'ಜೈಶ್-ಎ-ಮೊಹಮ್ಮದ್' ಉಗ್ರ ಸಂಘಟನೆಯ ಸಕ್ರಿಯ ಸದಸ್ಯ ಹಮೀದ್ ಮಂಡಲ್ ಎಂಬಾತನನ್ನು ಶುಕ್ರವಾರ ಬಂಧಿಸಲಾಗಿದೆ.

ಬಂಧಿತ ಉಗ್ರನಿಂದ ವಶಪಡಿಸಿಕೊಂಡ ಮೊಬೈಲ್ ಫೋನ್ ಮತ್ತು ಪ್ರಮುಖ ದಾಖಲೆಗಳನ್ನು ಎಸ್ಟಿಎಫ್ ಪಡೆಗಳು ವಶಪಡಿಸಿಕೊಂಡಿವೆ. ಈತನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳ ಕಾರ್ಯಕ್ರಮಗಳನ್ನು ಲಕ್ಷ್ಯವಿಟ್ಟು ವಿಐಪಿಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದ ಎಂದು ಶಂಕೆ ವ್ಯಕ್ತಪಡಿಸಲಾಗಿದೆ.
ಬರ್ಧಮಾನ್ನ ನವೋದಯ ಟೌನ್ಶಿಪ್ ಪ್ರದೇಶದ ಬಾಡಿಗೆ ಫ್ಲಾಟ್ ಒಂದರ ಮೇಲೆ ಎಸ್ಟಿಎಫ್ ಪೊಲೀಸರು ದಾಳಿ ನಡೆಸಿ ಹಮೀದ್ ಮಂಡಲ್ನನ್ನು ವಶಕ್ಕೆ ಪಡೆದಿದ್ದಾರೆ. ಈತ ತನಿಖಾ ಸಂಸ್ಥೆಗಳ ಕಣ್ಣು ತಪ್ಪಿಸಲು ಕಳೆದ 2-3 ತಿಂಗಳುಗಳಿಂದ ರಹಸ್ಯವಾಗಿ ಈ ಫ್ಲಾಟ್ನಲ್ಲಿ ವಾಸಿಸುತ್ತಿದ್ದ. ಜೊತೆಗೆ ಆತ ಜುಲೈ 9 ರಿಂದ ಪಶ್ಚಿಮ ಬಂಗಾಳ ಮುಖ್ಯಮಂತ್ರಿಗಳ ಪ್ರವಾಸ ಹಾಗೂ ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ತೀವ್ರವಾಗಿ ಗಮನಿಸುತ್ತಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಮತ್ತೊಂದೆಡೆ, ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ನಲ್ಹತಿ ಪ್ರದೇಶದ ಪಾಳುಬಿದ್ದ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಪೊಲೀಸರು 800 ಕೆಜಿಗೂ ಹೆಚ್ಚು ಅಮೋನಿಯಂ ನೈಟ್ರೇಟ್, 1,200 ಕ್ಕೂ ಹೆಚ್ಚು ಜೆಲಾಟಿನ್ ಸ್ಟಿಕ್ಗಳು, 105 ಡಿಟೋನೇಟರ್ಗಳು, 36 ಸ್ಫೋಟಕ ಫ್ಯೂಸ್ ಕಾಯಿಲ್ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಇನ್ನು ಈ ಸ್ಫೋಟಕಗಳಿಗೂ ಹಾಗೂ ಉಗ್ರ ಹಮೀದ್ ಮಂಡಲ್ಗೂ ಲಿಂಕ್ ಇದೆಯೇ ಎಂಬುದರ ಕುರಿತು ಎಸ್ಟಿಎಫ್ ಮತ್ತು ಸ್ಥಳೀಯ ಪೊಲೀಸರು ಜಂಟಿ ತನಿಖೆ ನಡೆಸುತ್ತಿದ್ದಾರೆ.