ಬೆಂಗಳೂರು, ಆ. 01 (DaijiworldNews/AA): ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯ ಮತಗಳ ಮರುಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಅವರು 9 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಹೈಕೋರ್ಟ್ ನಿರ್ದೇಶನದಂತೆ ಸೀಲ್ ಮಾಡಿದ್ದ ಫಲಿತಾಂಶವನ್ನು ಇಂದು ಪ್ರಕಟಿಸಲಾಗಿದ್ದು, ಇದು ಹಾಲಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ಹಾಗೂ ಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಅವರಿಗೆ ದೊಡ್ಡ ಹಿನ್ನಡೆಯಾಗಿದೆ.

2021ರ ಡಿಸೆಂಬರ್ನಲ್ಲಿ ನಡೆದ ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಕೆ. ಪ್ರಾಣೇಶ್ ಅವರು ಕೇವಲ 6 ಮತಗಳ ಅಂತರದಿಂದ ಜಯಗಳಿಸಿದ್ದರು. ಆದರೆ, ನಾಮನಿರ್ದೇಶಿತ ಸದಸ್ಯರು ಚಲಾಯಿಸಿದ್ದ ಮತಗಳ ಮಾನ್ಯತೆಯನ್ನು ಪ್ರಶ್ನಿಸಿ ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಅವರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ನಾಮನಿರ್ದೇಶಿತ ಸದಸ್ಯರ ಮತಗಳನ್ನು ಹೊರತುಪಡಿಸಿ ಮತಗಳ ಮರುಎಣಿಕೆ ನಡೆಸುವಂತೆ ಚುನಾವಣಾ ಅಧಿಕಾರಿಗಳಿಗೆ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಎಂ.ಕೆ. ಪ್ರಾಣೇಶ್ ಅವರು ಸುಪ್ರೀಂ ಕೋರ್ಟ್ಗೆ ಮೊರೆ ಹೋಗಿದ್ದರು. ಆದರೆ, ಸುಪ್ರೀಂ ಕೋರ್ಟ್ ಅವರ ಅರ್ಜಿಯನ್ನು ವಜಾಗೊಳಿಸಿ, ಹೈಕೋರ್ಟ್ ನೀಡಿದ್ದ ಮರುಎಣಿಕೆ ಆದೇಶವನ್ನು ಎತ್ತಿಹಿಡಿದಿತ್ತು.
ಇದರಂತೆ, ನಾಮನಿರ್ದೇಶಿತ ಸದಸ್ಯರ ಮತಗಳನ್ನು ಹೊರತುಪಡಿಸಿ ಮರುಎಣಿಕೆ ನಡೆಸಲಾಯಿತು. ಏಕಸದಸ್ಯ ಪೀಠದ ನ್ಯಾಯಮೂರ್ತಿ ಎಸ್.ಜಿ. ಪಂಡಿತ್ ಅವರು ಗಾಯತ್ರಿ ಶಾಂತೇಗೌಡ ಅವರು 9 ಮತಗಳ ಅಂತರದಿಂದ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು. ಈ ತೀರ್ಪಿನೊಂದಿಗೆ ಗಾಯತ್ರಿ ಶಾಂತೇಗೌಡ ಅವರು ಪ್ರಸ್ತುತ ವಿಧಾನ ಪರಿಷತ್ ಅವಧಿಯ ಉಳಿದಿರುವ ಸುಮಾರು ಒಂದೂವರೆ ವರ್ಷದ ಅವಧಿಗೆ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಇದೇ ವೇಳೆ, ಗಾಯತ್ರಿ ಶಾಂತೇಗೌಡ ಅವರಿಗೆ ತಕ್ಷಣವೇ ಪ್ರಮಾಣವಚನ ಬೋಧಿಸುವಂತೆ ವಿಧಾನ ಪರಿಷತ್ ಸಭಾಪತಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಈ ತೀರ್ಪಿನಿಂದ 75 ಸದಸ್ಯರಿರುವ ಕರ್ನಾಟಕ ವಿಧಾನ ಪರಿಷತ್ನಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಬಲ 40ಕ್ಕೆ ಏರಿಕೆಯಾಗಿದೆ.