ನವದೆಹಲಿ, ಆ. 05 (DaijiworldNews/AA): ಬಾಂಗ್ಲಾದೇಶದಲ್ಲಿ 2024 ರ ಜುಲೈ-ಆಗಸ್ಟ್ ಅವಧಿಯಲ್ಲಿ ನಡೆದ ಚಳುವಳಿ ಶಾಂತಿಯುತ ವಿದ್ಯಾರ್ಥಿ ಚಳವಳಿಯಾಗಿರಲಿಲ್ಲ. ಬದಲಿಗೆ ಅದು ಆಡಳಿತ ಬದಲಾವಣೆಗೆಂದೇ ನಡೆಸಿದ ಸಂಘಟಿತ ಹಿಂಸಾತ್ಮಕ ರಾಜಕೀಯ ಅಸ್ತ್ರ ಎಂದು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಆರೋಪಿಸಿದ್ದಾರೆ.

ನವದೆಹಲಿಯ ಫಾರಿನ್ ಕರೆಸ್ಪಾಂಡೆಂಟ್ಸ್ ಕ್ಲಬ್ ಆಫ್ ಸೌತ್ ಏಷ್ಯಾ ಆಯೋಜಿಸಿದ್ದ ವರ್ಚುವಲ್ ಮಾಧ್ಯಮ ಸಂವಾದವನ್ನು ಉದ್ದೇಶಿಸಿ ಅವರು ಮಾತನಾಡಿದರು. ಈ ವೇಳೆ ಅವರು ಬಾಂಗ್ಲಾದೇಶವು ಸಾಗುತ್ತಿರುವ ಪ್ರಸ್ತುತ ದಾರಿಯ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ತಮಗೆ ಮರಣದಂಡನೆ ವಿಧಿಸಲಾಗಿದ್ದರೂ ಸಹ ಡಿಸೆಂಬರ್ನಲ್ಲಿ ಬಾಂಗ್ಲಾದೇಶಕ್ಕೆ ಹಿಂತಿರುಗುವುದಾಗಿ ಘೋಷಿಸಿದ ಅವರು, "ಕಳೆದ ಎರಡು ವರ್ಷಗಳಿಂದ ನನ್ನ ಪ್ರೀತಿಯ ಬಾಂಗ್ಲಾದೇಶ ಅನುಭವಿಸುತ್ತಿರುವ ಸಂಕಷ್ಟವನ್ನು ನಾನು ನೋಡುತ್ತಿದ್ದೇನೆ. ಇದು ನಾವು ಕಟ್ಟಿದ ಬಾಂಗ್ಲಾದೇಶವಲ್ಲ, ಹಾಗೂ 1971 ರ ವಿಮೋಚನಾ ಸಂಗ್ರಾಮದಲ್ಲಿ 30 ಲಕ್ಷ ಜನರು ತಮ್ಮ ಪ್ರಾಣತ್ಯಾಗ ಮಾಡಿದ್ದು ಈ ರೀತಿಯ ದೇಶಕ್ಕಾಗಿ ಅಲ್ಲ" ಎಂದು ಹೇಳಿದರು.