ಸೋನಿಪತ್, ಆ. 06 (DaijiworldNews/TA): ಒಂದು ಕಾಲದಲ್ಲಿ ಮುಂಬೈನ ಜವಳಿ ಉದ್ಯಮದಲ್ಲಿ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಸಿದ್ದ ಉದ್ಯಮಿ, ಜೀವನದ ಕೊನೆಯ ದಿನಗಳಲ್ಲಿ ವೃದ್ಧಾಶ್ರಮದಲ್ಲಿ ಒಂಟಿಯಾಗಿ ಸಾವನ್ನಪ್ಪಿದ ಘಟನೆ ಹರಿಯಾಣದ ಸೋನಿಪತ್ನಲ್ಲಿ ಬೆಳಕಿಗೆ ಬಂದಿದೆ. 74 ವರ್ಷದ ಶಿವಚರಣ್ ರಾಮರತನ್ ಗುಪ್ತಾ ಅವರ ಬದುಕಿನ ಕೊನೆಯ ಅಧ್ಯಾಯವು ಇಂದಿನ ಸಮಾಜದಲ್ಲಿ ವೃದ್ಧರ ಸ್ಥಿತಿ ಮತ್ತು ಕೌಟುಂಬಿಕ ಸಂಬಂಧಗಳ ಬದಲಾಗುತ್ತಿರುವ ಚಿತ್ರಣವನ್ನು ಮತ್ತೊಮ್ಮೆ ಚರ್ಚೆಗೆ ತಂದಿದೆ.

ಶಿವಚರಣ್ ಗುಪ್ತಾ ಅವರು ಮುಂಬೈನಲ್ಲಿ ಯಶಸ್ವಿ ಜವಳಿ ಉದ್ಯಮಿಯಾಗಿದ್ದರು. ಆದರೆ, ವ್ಯವಹಾರದಲ್ಲಾದ ನಷ್ಟ ಮತ್ತು ಕುಟುಂಬದಿಂದ ದೂರವಾದ ಕಾರಣ ಅವರು ಪತ್ನಿಯೊಂದಿಗೆ ಸೋನಿಪತ್ನ ವೃದ್ಧಾಶ್ರಮದಲ್ಲಿ ಆಶ್ರಯ ಪಡೆದಿದ್ದರು. ಸುಮಾರು ಎರಡು ವರ್ಷಗಳ ಹಿಂದೆ ಅವರ ಪತ್ನಿ ನಿಧನರಾಗಿದ್ದು, ಬಳಿಕ ಶಿವಚರಣ್ ಕಳೆದ ಮೂರು ವರ್ಷಗಳಿಂದ ಅದೇ ವೃದ್ಧಾಶ್ರಮದಲ್ಲೇ ಏಕಾಂಗಿಯಾಗಿ ಜೀವನ ಸಾಗಿಸುತ್ತಿದ್ದರು. ಶಿವಚರಣ್ ಅವರ ನಿಧನದ ಬಳಿಕ ವೃದ್ಧಾಶ್ರಮದ ಆಡಳಿತ ಮಂಡಳಿ ಮುಂಬೈನಲ್ಲಿ ನೆಲೆಸಿರುವ ಅವರ ಮೂವರು ಪುತ್ರಿಯರನ್ನು ಸಂಪರ್ಕಿಸಿತು. ಆದರೆ, ಮೃತದೇಹವನ್ನು ಮುಂಬೈಗೆ ಕೊಂಡೊಯ್ಯುವುದಕ್ಕೂ, ತಾವೇ ಸೋನಿಪತ್ಗೆ ಬಂದು ಅಂತಿಮ ದರ್ಶನ ಪಡೆಯುವುದಕ್ಕೂ ಅವರು ನಿರಾಕರಿಸಿದ್ದಾರೆ ಎನ್ನಲಾಗಿದೆ.
ಬದಲಾಗಿ, ಆನ್ಲೈನ್ ಮೂಲಕ ರೂ.5,100 ವರ್ಗಾವಣೆ ಮಾಡಿ, ಸೋನಿಪತ್ನಲ್ಲಿಯೇ ಅಂತ್ಯಸಂಸ್ಕಾರ ನೆರವೇರಿಸುವಂತೆ ವೃದ್ಧಾಶ್ರಮದ ಆಡಳಿತಕ್ಕೆ ತಿಳಿಸಿರುವುದಾಗಿ ವರದಿಯಾಗಿದೆ. ವೃದ್ಧಾಶ್ರಮದ ನಿರ್ದೇಶಕ ಆನಂದ್ ಕುಮಾರ್ ಅವರು ಸ್ವತಃ ಅಂತ್ಯಸಂಸ್ಕಾರದ ಎಲ್ಲಾ ವ್ಯವಸ್ಥೆಗಳನ್ನು ನಡೆಸಿಕೊಟ್ಟರು. ಅಂತ್ಯಕ್ರಿಯೆಯ ಸಂಪೂರ್ಣ ಪ್ರಕ್ರಿಯೆಯನ್ನು ಪುತ್ರಿಯರಿಗೆ ವೀಡಿಯೊ ಕರೆ ಮೂಲಕ ತೋರಿಸಲಾಯಿತು. ಈ ವೇಳೆ, ತಂದೆಯ ಅಂತ್ಯಸಂಸ್ಕಾರ ನಡೆಯುತ್ತಿದ್ದಾಗ ಪುತ್ರಿಯರಲ್ಲಿ ಒಬ್ಬರು "ಇನ್ನೂ ಎಷ್ಟು ಸಮಯ ಬೇಕು?" ಎಂದು ಪದೇ ಪದೇ ಪ್ರಶ್ನಿಸಿದ್ದಾಗಿ ವೃದ್ಧಾಶ್ರಮದ ಸಿಬ್ಬಂದಿ ತಿಳಿಸಿದ್ದಾರೆ. ಅಲ್ಲದೆ, ಚಿತಾಭಸ್ಮವನ್ನು ಪಡೆದುಕೊಳ್ಳಲು ಬರುವಂತೆ ಕೇಳಿದಾಗ, "ನೋಡೋಣ" ಎಂಬ ಉತ್ತರ ನೀಡಿರುವುದಾಗಿ ತಿಳಿದುಬಂದಿದೆ.
ಈ ಘಟನೆ ಬಹಿರಂಗವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಹೆತ್ತವರನ್ನು ಜೀವನದ ಕೊನೆಯ ಹಂತದಲ್ಲಿ ನಿರ್ಲಕ್ಷಿಸುವ ಪ್ರವೃತ್ತಿ ಆತಂಕಕಾರಿ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ 'ಹಿರಿಯ ನಾಗರಿಕರ ಮತ್ತು ಪೋಷಕರ ಪೋಷಣೆ ಹಾಗೂ ಕಲ್ಯಾಣ ಕಾಯ್ದೆ–2007' ಜಾರಿಯಲ್ಲಿದ್ದರೂ, ಅನೇಕ ವೃದ್ಧರು ಮಕ್ಕಳಿಂದ ಸಮರ್ಪಕ ಕಾನೂನು ಹಾಗೂ ಭಾವನಾತ್ಮಕ ಬೆಂಬಲ ಸಿಗದೆ ವೃದ್ಧಾಶ್ರಮಗಳಲ್ಲಿ ಜೀವನ ಕಳೆಯುತ್ತಿರುವುದು ಈ ಘಟನೆ ಮತ್ತೊಮ್ಮೆ ಬೆಳಕಿಗೆ ತಂದಿದೆ.