ಬೆಂಗಳೂರು, ಆ. 08 (DaijiworldNews/AA): ಕಳೆದ 3 ತಿಂಗಳ ಅವಧಿಯಲ್ಲಿ ಕರ್ನಾಟಕದಲ್ಲಿ ಸಾವಿರ ಮಂದಿ ಅಕ್ರಮ ವಲಸಿಗರು ಪತ್ತೆಯಾಗಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಅಕ್ರಮ ವಲಸಿಗರ ವಿಚಾರವಾಗಿ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಕರ್ನಾಟಕದಲ್ಲಿ ಕಳೆದ ಮೂರು ತಿಂಗಳಿನಿಂದ ನಡೆಸುತ್ತಿರುವ ಕಟ್ಟುನಿಟ್ಟಿನ ತಪಾಸಣೆ ಮತ್ತು ಶೋಧ ಕಾರ್ಯಾಚರಣೆಯಲ್ಲಿ ಬಾಂಗ್ಲಾದೇಶ ಹಾಗೂ ಆಫ್ರಿಕಾದಿಂದ ಬಂದಿರುವ ಶಂಕಿತ ಅಕ್ರಮ ವಲಸಿಗರು ಸೇರಿದಂತೆ ಸುಮಾರು 1,000 ಮಂದಿಯನ್ನು ಗುರುತಿಸಲಾಗಿದೆ" ಎಂದರು.
"ಬಾಂಗ್ಲಾದೇಶದಿಂದ ಬಂದಿರುವ ಅಕ್ರಮ ವಲಸಿಗರ ಕುರಿತು ಶೋಧ ನಡೆಸಲಾಗುತ್ತಿದೆ. ಅವರು ಬಾಂಗ್ಲಾದೇಶ ಅಥವಾ ಆಫ್ರಿಕಾದಿಂದ ಬಂದವರಾಗಿರಬಹುದು. ನಾವು ಕಟ್ಟುನಿಟ್ಟಾಗಿ ಹಾಗೂ ಗಂಭೀರವಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಕಳೆದ ಮೂರು ತಿಂಗಳಲ್ಲಿ ಸುಮಾರು 1,000 ವಲಸಿಗರನ್ನು ಗುರುತಿಸಲಾಗಿದೆ. ಅವರೆಲ್ಲರೂ ಉತ್ತರ ಭಾರತದಿಂದ ಬರುತ್ತಿದ್ದಾರೆ" ಎಂದು ಹೇಳಿದರು.
"ಅಕ್ರಮ ವಲಸಿಗರ ವಿರುದ್ಧ ಸರ್ಕಾರ ಶೂನ್ಯ ಸಹಿಷ್ಣುತೆ ನೀತಿ ಅನುಸರಿಸುತ್ತಿದೆ. ಈ ಕಾರ್ಯಾಚರಣೆ ತಾತ್ಕಾಲಿಕವಾಗಿ ನಡೆಸಿ ನಿಲ್ಲಿಸುವುದಲ್ಲ, ನಿರಂತರವಾಗಿ ಮುಂದುವರಿಯಲಿದೆ. ಅಕ್ರಮ ವಲಸಿಗರ ಪತ್ತೆ ವಿಚಾರದಲ್ಲಿ ರಾಜ್ಯದ ಕಾನೂನು ಜಾರಿ ಸಂಸ್ಥೆಗಳು ಗಡಿ ಭದ್ರತಾ ಪಡೆ (ಬಿಎಸ್ಎಫ್) ಹಾಗೂ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್ಆರ್ಒ) ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿವೆ" ಎಂದು ಮಾಹಿತಿ ನೀಡಿದರು.
"ನಾವು ಈಗಾಗಲೇ ಬಿಎಸ್ಎಫ್ ಹಾಗೂ ಎಫ್ಆರ್ಒ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಈ ವಿಚಾರದಲ್ಲಿ ಶೇ.100 ರಷ್ಟು ಗಮನ ಹರಿಸುತ್ತಿದ್ದೇವೆ. ಒಂದು ವಾರ ಕಾರ್ಯಾಚರಣೆ ನಡೆಸಿ ನಂತರ ನಿಲ್ಲಿಸುವ ಕೆಲಸ ಇದಲ್ಲ. ಇದನ್ನು ನಿರಂತರವಾಗಿ ಮುಂದುವರಿಸಬೇಕು. ಅಗತ್ಯವಿದ್ದರೆ ಪ್ರತ್ಯೇಕ ತಂಡ ರಚಿಸುತ್ತೇವೆ. ಮುಖ್ಯವಾಗಿ, ಕೇಂದ್ರ ಸರ್ಕಾರ ಈ ವಿಚಾರದಲ್ಲಿ ನಮಗೆ ಸಹಕಾರ ನೀಡಬೇಕು" ಎಂದು ಅಭಿಪ್ರಾಯಪಟ್ಟರು.
"ನಮ್ಮ ರಾಜ್ಯಕ್ಕೆ ಯಾವುದೇ ಅಂತರರಾಷ್ಟ್ರೀಯ ಗಡಿ ಇಲ್ಲ. ಬಾಂಗ್ಲಾದೇಶ, ನೇಪಾಳ ಅಥವಾ ಬೇರೆ ಯಾವುದೇ ದೇಶದೊಂದಿಗೆ ನಾವು ಗಡಿ ಹಂಚಿಕೊಂಡಿಲ್ಲ. ಆದರೆ ಅವರು ರಾಜ್ಯಕ್ಕೆ ಬರುತ್ತಿದ್ದರೆ, ಎಲ್ಲಿಂದ ಬರುತ್ತಿದ್ದಾರೆ? ತ್ರಿಪುರ, ಅಸ್ಸಾಂ ಅಥವಾ ಪಶ್ಚಿಮ ಬಂಗಾಳದ ಮೂಲಕ ಬರುತ್ತಿದ್ದಾರೆಯೇ? ಗಡಿ ಭದ್ರತೆ ಕೇಂದ್ರ ಸರ್ಕಾರದ ಜವಾಬ್ದಾರಿ. ನನ್ನ ಅಭಿಪ್ರಾಯದಲ್ಲಿ, ಕೇಂದ್ರ ಸರ್ಕಾರ ತನ್ನ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಜನರು ಇಷ್ಟು ದೂರ ಬರುತ್ತಿದ್ದಾರೆ ಎಂದರೆ ಅಂತರರಾಷ್ಟ್ರೀಯ ಗಡಿಗಳು ಮಾತ್ರವಲ್ಲ, ರಾಜ್ಯಗಳ ನಡುವಿನ ಗಡಿಗಳೂ ದುರ್ಬಲವಾಗಿವೆ ಎಂದರ್ಥ" ಎಂದರು.