ಹಾಸನ, ಆ. 08 (DaijiworldNews/ AK): ಕಾಂಗ್ರೆಸ್ ಪಕ್ಷದಲ್ಲಿರುವ ಅಸಮಾಧಾನಿತ ಶಾಸಕರಿಗೆ ಜೆಡಿಎಸ್ ಪಕ್ಷದ ಬಾಗಿಲು ತೆರೆದಿದೆ. ನೊಂದವರಿಗೆ, ನೋವಿನಲ್ಲಿರುವವರಿಗೆ ಮುಂದಿನ ದಿನಗಳಲ್ಲಿ ಪರಿಹಾರ ನೀಡುವ ಕೆಲಸವನ್ನು ಜೆಡಿಎಸ್ ಮಾಡಲಿದೆ ಎಂದು ಹೇಳುವ ಮೂಲಕ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು ಬಹಿರಂಗ ಆಹ್ವಾನ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವೇಳೆ, ಸಚಿವ ಸ್ಥಾನ ಸಿಗದ ಕಾಂಗ್ರೆಸ್ನ ಹಲವು ಶಾಸಕರು ನೋವಿನಲ್ಲಿದ್ದಾರೆ. ಅವರಿಗೆ ಮಾತು ಕೊಟ್ಟಿದ್ದರೂ ಅದರಂತೆ ನಡೆದುಕೊಂಡಿಲ್ಲ ಎಂದು ಕೆಲವರು ನೋವು ತೋಡಿಕೊಂಡಿರುವುದನ್ನು ಗಮನಿಸಿದ್ದೇನೆ. ಎಲ್ಲಾ ರೀತಿಯ ಸಹಕಾರ ನೀಡಲು ತಯಾರಿರುವ ಹಾಗೂ ಮುಕ್ತ ಮನಸ್ಸಿನಿಂದ ಜೆಡಿಎಸ್ಗೆ ಬರುವವರಿಗೆ ಆಹ್ವಾನ ನೀಡಲು ನಾನು ಸಿದ್ಧನಿದ್ದೇನೆ ಎಂದು ಹೇಳಿದರು.
ಜೆಡಿಎಸ್ ಪಕ್ಷದ ಬಾಗಿಲು ತೆರೆದಿರುವುದಕ್ಕಿಂತಲೂ ಹೆಚ್ಚಿನ ರೀತಿಯಲ್ಲಿ ರಾಜ್ಯದ ಪರಿಸ್ಥಿತಿ ಬದಲಾಗಬೇಕಾದ ಅಗತ್ಯವಿದೆ. ರಾಜ್ಯದಲ್ಲಿ ಇಂತಹ ಪರಿಸ್ಥಿತಿಯನ್ನು ಹೋಗಲಾಡಿಸಿ ಉತ್ತಮ ಕೆಲಸ ಮಾಡುವ ಸರ್ಕಾರ ಬರಬೇಕು. ಜನಪರವಾದ ತೀರ್ಮಾನ ಕೈಗೊಳ್ಳುವಂತಹ ಶಕ್ತಿ ಬೆಳೆಯಬೇಕು ಎಂದರು.