ನವದೆಹಲಿ, ಆ. 09 (DaijiworldNews/TA): ಮೆಟಾ ಒಡೆತನದ ಜನಪ್ರಿಯ ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸಾಪ್ ಭಾರತದಲ್ಲಿ ಬಳಕೆದಾರರ ವಯಸ್ಸನ್ನು ದೃಢೀಕರಿಸುವ ಉದ್ದೇಶದಿಂದ ಹೊಸ ಫೀಚರ್ವೊಂದನ್ನು ಪರೀಕ್ಷಿಸಲು ಆರಂಭಿಸಿದೆ.

ಈ ಹೊಸ ವ್ಯವಸ್ಥೆಯಡಿ, ಕೆಲ ಬಳಕೆದಾರರಿಗೆ ‘Add your date of birth’ ಎಂಬ ಪ್ರಾಂಪ್ಟ್ ಕಾಣಿಸಿಕೊಳ್ಳುತ್ತಿದ್ದು, ತಮ್ಮ ಜನ್ಮ ದಿನಾಂಕವನ್ನು ನಮೂದಿಸುವಂತೆ ಸೂಚಿಸಲಾಗುತ್ತಿದೆ. ಭಾರತದಲ್ಲಿ ಜಾರಿಗೆ ಬರಲಿರುವ ಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣೆ ಕಾಯ್ದೆಗೆ ಅನುಗುಣವಾಗಿ ಈ ರೀತಿಯ ವಯಸ್ಸು ದೃಢೀಕರಣ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗುತ್ತಿದೆ ಎನ್ನಲಾಗಿದೆ.
ಪ್ರಸ್ತುತ ಈ ಫೀಚರ್ ಪರೀಕ್ಷಾ ಹಂತದಲ್ಲಿರುವುದರಿಂದ ಬಳಕೆದಾರರು ತಮ್ಮ ಜನ್ಮ ದಿನಾಂಕವನ್ನು ನಮೂದಿಸುವುದು ಕಡ್ಡಾಯವಲ್ಲ. ಜನ್ಮ ದಿನಾಂಕವನ್ನು ನೀಡದಿದ್ದರೂ ವಾಟ್ಸಾಪ್ ಬಳಕೆಯನ್ನು ಮುಂದುವರಿಸಬಹುದಾಗಿದೆ. ಹೊಸ ವ್ಯವಸ್ಥೆಯ ಉದ್ದೇಶ ಬಳಕೆದಾರರ ವಯಸ್ಸನ್ನು ಪರಿಶೀಲಿಸುವುದಾಗಿದ್ದು, ವಿಶೇಷವಾಗಿ ಅಪ್ರಾಪ್ತ ವಯಸ್ಕರ ವೈಯಕ್ತಿಕ ದತ್ತಾಂಶದ ರಕ್ಷಣೆಗೆ ಹೆಚ್ಚಿನ ಒತ್ತು ನೀಡುವ ಸಾಧ್ಯತೆಯಿದೆ.
ಬಳಕೆದಾರರು ನೀಡುವ ಜನ್ಮ ದಿನಾಂಕ ಹಾಗೂ ವಯಸ್ಸಿನ ಮಾಹಿತಿಯನ್ನು ಇತರ ವಾಟ್ಸಾಪ್ ಬಳಕೆದಾರರೊಂದಿಗೆ ಹಂಚಿಕೊಳ್ಳಲಾಗುವುದಿಲ್ಲ ಎಂದು ಮೆಟಾ ವಕ್ತಾರರು ಸ್ಪಷ್ಟಪಡಿಸಿದ್ದಾರೆ. ಅಂದರೆ, ಬಳಕೆದಾರರು ತಮ್ಮ ಜನ್ಮ ದಿನಾಂಕವನ್ನು ನಮೂದಿಸಿದರೂ ಅದು ಅವರ ವಾಟ್ಸಾಪ್ ಸಂಪರ್ಕಗಳಿಗೆ ಸಾರ್ವಜನಿಕವಾಗಿ ಗೋಚರಿಸುವುದಿಲ್ಲ.
ಭಾರತದ DPDP ಕಾಯ್ದೆ ಅಪ್ರಾಪ್ತ ವಯಸ್ಕರ ವೈಯಕ್ತಿಕ ದತ್ತಾಂಶದ ಬಳಕೆಗೆ ಸಂಬಂಧಿಸಿದಂತೆ ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಒದಗಿಸುತ್ತದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ವೈಯಕ್ತಿಕ ದತ್ತಾಂಶವನ್ನು ಸಂಸ್ಕರಿಸುವ ಡಿಜಿಟಲ್ ಪ್ಲಾಟ್ಫಾರ್ಮ್ಗಳು ಸೂಕ್ತ ವಯಸ್ಸು ದೃಢೀಕರಣ ವ್ಯವಸ್ಥೆ ಹೊಂದುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ವಾಟ್ಸಾಪ್ನ ಹೊಸ ಫೀಚರ್ ಮಹತ್ವ ಪಡೆದಿದೆ. ಪ್ರಸ್ತುತ ಆಯ್ದ ಬಳಕೆದಾರರಲ್ಲಿ ಮಾತ್ರ ಪರೀಕ್ಷಿಸಲಾಗುತ್ತಿರುವ ಈ ಫೀಚರ್, ಪರೀಕ್ಷೆ ಯಶಸ್ವಿಯಾದ ಬಳಿಕ ಹಂತ ಹಂತವಾಗಿ ಹೆಚ್ಚಿನ ಬಳಕೆದಾರರಿಗೆ ಲಭ್ಯವಾಗುವ ನಿರೀಕ್ಷೆಯಿದೆ.