ನವದೆಹಲಿ, ಆ. 09 (DaijiworldNews/AA): ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ಕ್ರಮಕ್ಕೆ ಅಮಿತ್ ಶಾ ಹೊಣೆಗಾರಿಕೆ ವಹಿಸಬೇಕು, ನೀವು ಉತ್ತರಿಸಲೇಬೇಕು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

ಪ್ರಯಾಗ್ರಾಜ್ನಲ್ಲಿ ನಡೆದ 'ಛಾತ್ರೋನ್ ಕಿ ಗೂಂಜ್' ಕಾರ್ಯಕ್ರಮದ ಬಳಿಕ ರಾಹುಲ್ ಗಾಂಧಿ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, "ಜುಲೈ 20ರಂದು ನೀಟ್ ಹಗರಣ ವಿರೋಧಿಸಿ ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ದೌರ್ಜನ್ಯ ನಡೆದಿದೆ. ವಿದ್ಯಾರ್ಥಿಗಳು ಹಲವು ವರ್ಷಗಳಿಂದ ಪರೀಕ್ಷೆ ಹಾಗೂ ಉದ್ಯೋಗಕ್ಕಾಗಿ ಕಷ್ಟಪಡುತ್ತಿದ್ದಾರೆ. ಕುಟುಂಬದವರು ಸಾಲ ಮಾಡಿ ಶಿಕ್ಷಣ ಕೊಡಿಸುತ್ತಿದ್ದಾರೆ. ಆದರೆ, ವ್ಯವಸ್ಥೆಯಲ್ಲಿನ ಸಮಸ್ಯೆಗಳಿಂದ ಯುವಕರಿಗೆ ಸರಿಯಾದ ಅವಕಾಶಗಳು ಸಿಗುತ್ತಿಲ್ಲ. ಈ ಅಪರಾಧಕ್ಕೆ ಅಮಿತ್ ಶಾ ಉತ್ತರಿಸಲೇಬೇಕು" ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
"ದೆಹಲಿಯ ಬೀದಿಗಳಲ್ಲಿ ವಿದ್ಯಾರ್ಥಿಗಳ ಮೇಲೆ ಲಾಠಿ ಮತ್ತು ಪೆಲೆಟ್ ಗನ್ಗಳಿಂದ ದಾಳಿ ನಡೆದಿದೆ. ಘಟನೆ ನಡೆದು 13 ದಿನಗಳಾದರೂ ಗೃಹ ಸಚಿವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ವಿದ್ಯಾರ್ಥಿಗಳು ದೇಶದ ಬೆಳಕು. ಅವರ ಪರವಾಗಿ ನಾನು ನಿಲ್ಲುತ್ತೇನೆ. ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮಕ್ಕೆ ಕ್ಷಮೆಯಾಚಿಸುವ ಬದಲು ಸರ್ಕಾರ ಮೌನವಾಗಿದೆ" ಎಂದು ಪೋಸ್ಟ್ ಮಾಡಿದ್ದಾರೆ.
"ದೇಶದ ಯುವಕರು ಉದ್ಯೋಗಾವಕಾಶವನ್ನೇ ನೀಡದ ಶಿಕ್ಷಣ ವ್ಯವಸ್ಥೆಯಲ್ಲಿ ಸಿಲುಕಿದ್ದಾರೆ. ಭಾರತೀಯರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ದೊಡ್ಡ ಮೊತ್ತದ ಹಣ ಖರ್ಚು ಮಾಡುತ್ತಾರೆ. ಆದರೆ, ಪದವಿ ಪಡೆದ ನಂತರವೂ ಉದ್ಯೋಗ ಸಿಗದ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ. ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ, ಹಣ ಕೊಟ್ಟು ಪ್ರಶ್ನೆಪತ್ರಿಕೆ ಪಡೆಯುವಂತಹ ಆರೋಪಗಳು ನ್ಯಾಯಯುತವಾಗಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿವೆ. ಯುವಕರ ಸಾಮರ್ಥ್ಯ ದೊಡ್ಡದಿದ್ದರೂ ವ್ಯವಸ್ಥೆ ಅವರನ್ನು 'ಚಕ್ರವ್ಯೂಹ'ದಲ್ಲಿ ಸಿಲುಕಿಸಿದೆ" ಎಂದು ಬರೆದುಕೊಂಡಿದ್ದಾರೆ.
"ವಿದ್ಯಾರ್ಥಿಗಳು ದ್ವೇಷ ಅಥವಾ ಹಿಂಸೆಯ ಹಾದಿ ಹಿಡಿಯಬಾರದು. ಪ್ರೀತಿ ಮತ್ತು ಒಗ್ಗಟ್ಟಿನ ಮೂಲಕ ವ್ಯವಸ್ಥೆಯನ್ನು ಬದಲಾಯಿಸಬೇಕು ಎಂದು ರಾಹುಲ್ ಗಾಂಧಿ ಕರೆ ನೀಡಿದರು. ಯುವಕರು ದೇಶದ ಶಕ್ತಿ ಮತ್ತು ಹೆಮ್ಮೆ. ಅವರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವುದು ಅಗತ್ಯ ಪೋಸ್ಟ್ ಹಂಚಿಕೊಂಡಿದ್ದಾರೆ.