ಬಿಹಾರ, ಆ. 10 (DaijiworldNews/AA): ದೃಢ ಸಂಕಲ್ಪ, ಪರಿಶ್ರಮ ಹಾಗೂ ಸರಿಯಾದ ಮಾರ್ಗದರ್ಶನವಿದ್ದರೆ ಎಂತಹ ದೊಡ್ಡ ಕನಸನ್ನೂ ನನಸು ಮಾಡಬಹುದು. ಇದಕ್ಕೆ ಯುಪಿಎಸ್ಸಿ ಪರೀಕ್ಷೆಯಲ್ಲಿ ಎರಡು ಬಾರಿ ಉತ್ತೀರ್ಣರಾಗಿರುವ ಬಿಹಾರದ ಮೋನಿಕಾ ಶ್ರೀವಾಸ್ತವ ಅವರು ಅತ್ಯುತ್ತಮ ಉದಾಹರಣೆಯಾಗಿದ್ದಾರೆ.

ಮೋನಿಕಾ ಶ್ರೀವಾಸ್ತವ ಅವರು ಬಿಹಾರದ ಔರಂಗಾಬಾದ್ ಜಿಲ್ಲೆಯ ಸತ್ಯೇಂದ್ರ ನಗರ ನಿವಾಸಿಯಾಗಿದ್ದಾರೆ. ಮೋನಿಕಾ ಅವರ ತಂದೆ ಬಿ.ಕೆ. ಶ್ರೀವಾಸ್ತವ ಅವರು ಜಿಲ್ಲಾ ಪಂಚಾಯತ್ನಲ್ಲಿ ಸಹಾಯಕ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ತಾಯಿ ಭಾರತಿ ಶ್ರೀವಾಸ್ತವ ಗೃಹಿಣಿಯಾಗಿದ್ದಾರೆ.
ಬಾಲ್ಯದಿಂದಲೇ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಮೋನಿಕಾ ಅವರು ಸರಸ್ವತಿ ಶಿಶು ಮಂದಿರ ಹಾಗೂ ಡಿಎವಿ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಣ ಪಡೆದರು. ಅವರ ಶೈಕ್ಷಣಿಕ ಸಾಧನೆ ಮುಂದುವರಿದಿದ್ದು, ಐಐಟಿ ಪ್ರವೇಶ ಪರೀಕ್ಷೆಯಲ್ಲಿ ಬಿಹಾರ ರಾಜ್ಯದ ಟಾಪರ್ ಆಗಿ ಹೊರಹೊಮ್ಮಿದರು. ಬಳಿಕ ಗುವಾಹಟಿ ಐಐಟಿಯಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಪದವಿ ಪಡೆದರು.
ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಮೋನಿಕಾ ಅವರು ಹಲವು ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡಿದರು. ಆದರೆ ದೇಶ ಸೇವೆ ಮಾಡುವ ಉದ್ದೇಶದಿಂದ ಕಾರ್ಪೊರೇಟ್ ಉದ್ಯೋಗಕ್ಕೆ ರಾಜೀನಾಮೆ ನೀಡಿ ಯುಪಿಎಸ್ಸಿ ಪರೀಕ್ಷೆಗಳ ತಯಾರಿ ಆರಂಭಿಸಿದರು. ಅವರ ಪರಿಶ್ರಮಕ್ಕೆ 2022ರಲ್ಲಿ ಫಲ ದೊರೆತಿದ್ದು, ಬಿಹಾರ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಯಲ್ಲಿ 6ನೇ ರ್ಯಾಂಕ್ ಪಡೆದು ರಾಜ್ಯ ಆಡಳಿತ ಸೇವೆಗೆ ಆಯ್ಕೆಯಾದರು. ಈ ಸಾಧನೆ ಅವರ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿತು ಹಾಗೂ ಯುಪಿಎಸ್ಸಿ ಪರೀಕ್ಷೆಯತ್ತ ಗಮನ ಹರಿಸಲು ಪ್ರೇರೇಪಿಸಿತು.
ಮೋನಿಕಾ ಅವರು 2024ರಲ್ಲಿ ಮೊದಲ ಬಾರಿಗೆ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅಖಿಲ ಭಾರತ 455ನೇ ರ್ಯಾಂಕ್ ಪಡೆದರು. ಬಳಿಕ ಭಾರತೀಯ ರೈಲ್ವೆ ಮ್ಯಾನೇಜ್ಮೆಂಟ್ ಸರ್ವಿಸ್ ಅಧಿಕಾರಿಯಾಗಿ ತರಬೇತಿಗೆ ಸೇರಿದರು. ಆದರೆ, ಐಎಎಸ್ ಅಧಿಕಾರಿಯಾಗಬೇಕೆಂಬುದು ಅವರ ಗುರಿಯಾಗಿತ್ತು.
ಹೀಗಾಗಿ ಮತ್ತಷ್ಟು ದೃಢ ಸಂಕಲ್ಪದೊಂದಿಗೆ ಯುಪಿಎಸ್ಸಿ ಪರೀಕ್ಷೆಗೆ ಮೋನಿಕಾ ತಮ್ಮ ತಯಾರಿಯನ್ನು ಮುಂದುವರಿಸಿದರು. 2025ರಲ್ಲಿ ಎರಡನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆದ ಅವರು ಅಖಿಲ ಭಾರತ 16ನೇ ರ್ಯಾಂಕ್ ಗಳಿಸುವ ಮೂಲಕ ಐಎಎಸ್ ಸೇರುವ ತಮ್ಮ ಕನಸನ್ನು ನನಸು ಮಾಡಿಕೊಂಡರು