ನವದೆಹಲಿ, ಆ. 10 (DaijiworldNews/AA): ದೇಶದಲ್ಲಿ ಯಾರ ಮೇಲೆ ಕೇಸ್ಗಳಿಲ್ಲ ಎಂದು ಪ್ರಶ್ನಿಸುವ ಮೂಲಕ ಬಿ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿದ ವಿಪಕ್ಷಗಳ ವಿರುದ್ಧ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ದೇಶದಲ್ಲಿ ಯಾರ ಮೇಲೆ ಕೇಸ್ಗಳಿಲ್ಲ? ಹೆಚ್.ಡಿ. ಕುಮಾರಸ್ವಾಮಿ ಜಾಮೀನು ಪಡೆದುಕೊಂಡಿಲ್ಲವೇ? ದೇಶದಲ್ಲಿ ಎಷ್ಟು ಜನ ಸಚಿವರಾದವರು ಜಾಮೀನು ಮೇಲೆ ಇಲ್ಲ?" ಎಂದು ಪ್ರಶ್ನಿಸಿದರು.
"ನಾಗೇಂದ್ರ ಅವರು ಕರ್ನಾಟಕದಿಂದ ಹೊರಗೆ ಹೋಗಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಯಾವುದೇ ನಿಯಮ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ಯಾವುದೇ ಆದೇಶ ನೀಡಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ಏನೇ ಇದ್ದರೂ ಅದನ್ನು ಪರಿಶೀಲಿಸುತ್ತೇವೆ. ವಿಪಕ್ಷಗಳಿಗೆ ಚರ್ಚಿಸಲು ವಿಷಯಗಳು ಬೇಕು, ಹಾಗಾಗಿ ಮಾತನಾಡುತ್ತಿದ್ದಾರೆ, ಮಾತನಾಡಲಿ ಬಿಡಿ" ಎಂದರು.
"ಪರಿಷತ್ ಸಭಾಪತಿ ಸ್ಥಾನಕ್ಕೆ ಅಭ್ಯರ್ಥಿಯನ್ನು ಕಣಕ್ಕಿಳಿಸುವಂತೆ ವರಿಷ್ಠರು ತಿಳಿಸಿದ್ದಾರೆ. ಬಸವರಾಜ ಹೊರಟ್ಟಿ ಅವರೇ ಸ್ವತಃ ನನ್ನ ಬಳಿ ಬಂದು ರಾಜೀನಾಮೆ ನೀಡುವುದಾಗಿ ತಿಳಿಸಿದ್ದರು. ಅವರು ಗೌರವಯುತವಾಗಿ ನೀಡಿದ ರಾಜೀನಾಮೆಯನ್ನು ಒಪ್ಪಿಕೊಳ್ಳಲಾಗಿತ್ತು. ಹೊರಟ್ಟಿ ಅವರೇ ಸ್ವತಃ ಟೈಪ್ ಮಾಡಿ ರಾಜೀನಾಮೆ ಪತ್ರ ನೀಡಿದ್ದಾರೆ, ಇಲ್ಲದಿದ್ದರೆ ನಾವು ಅವಿಶ್ವಾಸ ನಿರ್ಣಯ ಮಂಡಿಸುತ್ತಿದ್ದೆವು" ಎಂದು ಹೇಳಿದರು.
"ಬಲವಂತವಾಗಿ ರಾಜೀನಾಮೆ ಕೊಡಿಸಲಾಗಿದೆ ಎಂದು ವಿಪಕ್ಷಗಳು ರಾಜ್ಯಪಾಲರಿಗೆ ದೂರು ನೀಡಿ ಕಾನೂನು ತೊಡಕು ಸೃಷ್ಟಿಸಲು ಯತ್ನಿಸುತ್ತಿವೆ. ಈ ಹಿನ್ನೆಲೆಯಲ್ಲಿ ಯು.ಟಿ. ಖಾದರ್ ಹಾಗೂ ನಾನು ರಾಜ್ಯಪಾಲರನ್ನು ಭೇಟಿಯಾಗಿ ಸಂಪೂರ್ಣ ವಿವರಣೆ ನೀಡಿದ್ದೇವೆ. ಬಿಜೆಪಿ ತನ್ನದೇ ಪಕ್ಷದ ಹಿರಿಯ ನಾಯಕರಿಗೆ ಕಿರುಕುಳ ನೀಡುತ್ತಿದ್ದು, ಈ ಬಗ್ಗೆ ಹೈಕಮಾಂಡ್ ಹಾಗೂ ರಾಜ್ಯಪಾಲರ ಗಮನಕ್ಕೆ ತರಲಾಗಿದೆ" ಎಂದು ತಿಳಿಸಿದರು.