ನವದೆಹಲಿ, ಆ. 10 (DaijiworldNews/AA): ರಾಹುಲ್ ಗಾಂಧಿ ಅವರನ್ನು ಟೀಕಿಸುವ ಅಥವಾ ಬಿಜೆಪಿಗೆ ಅನುಕೂಲವಾಗುವಂತಹ ಹೇಳಿಕೆಗಳನ್ನು ನೀಡುವಾಗ ಪಕ್ಷದ ಮುಖಂಡರು ಎಚ್ಚರಿಕೆ ವಹಿಸಬೇಕು ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಪಕ್ಷದ ಪ್ರತಿಭಟನೆಗಳ ಕುರಿತು ನೀಡಿರುವ ಹೇಳಿಕೆಗೆ ಹಿರಿಯ ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

"ತರೂರ್ ಅವರ ಹೇಳಿಕೆಯನ್ನು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ಮಾತ್ರ ನೋಡಿದ್ದೇನೆ. ಅವರು ನಿಖರವಾಗಿ ಏನು ಹೇಳಿದ್ದಾರೆ ಎಂಬುದನ್ನು ನಾನು ಕೇಳಿಲ್ಲ. ಯಾರಾದರೂ ರಾಹುಲ್ ಗಾಂಧಿಯಲ್ಲಿ ತಪ್ಪು ಹುಡುಕಿದರೆ ಅಥವಾ ಅವರ ವಿರುದ್ಧ ಎರಡು ನಕಾರಾತ್ಮಕ ಮಾತುಗಳನ್ನು ಹೇಳಿದರೆ ಬಿಜೆಪಿಗೆ ಅದಕ್ಕಿಂತ ಸಂತೋಷದ ವಿಚಾರ ಮತ್ತೊಂದಿಲ್ಲ" ಎಂದು ತಿಳಿಸಿದರು.
"ತರೂರ್ ಅವರು ಉದ್ದೇಶಪೂರ್ವಕವಾಗಿ ಈ ರೀತಿ ಹೇಳಿದ್ದಾರೆ ಎಂದು ನಾನು ಭಾವಿಸುವುದಿಲ್ಲ. ಆದರೂ ಇಂತಹ ಹೇಳಿಕೆಗಳನ್ನು ನೀಡುವುದರಿಂದ ನಾವೆಲ್ಲರೂ ದೂರವಿರಬೇಕು. ಕಾಂಗ್ರೆಸ್ನ ಸದಸ್ಯರು ಯಾವಾಗಲೂ ಪಕ್ಷದ ಚೌಕಟ್ಟು ಅಥವಾ ಶಿಸ್ತನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೂ, ಕೇವಲ ಬಿಜೆಪಿಯನ್ನು ಮೆಚ್ಚಿಸುವ ಅಥವಾ ಅವರಿಗೆ ಅನುಕೂಲ ಮಾಡಿಕೊಡುವಂತಹ ಹೇಳಿಕೆಗಳನ್ನು ನೀಡುವುದನ್ನು ತಪ್ಪಿಸಲು ನಾವು ಎಚ್ಚರ ವಹಿಸಬೇಕು" ಎಂದಿದ್ದಾರೆ.