ಮಡಿಕೇರಿ, ಆ. 10 (DaijiworldNews/TA): ಕೊಡಗು ಜಿಲ್ಲೆಯ ಮಡಿಕೇರಿ ನಗರದ ಸ್ಟೋನ್ ಹಿಲ್ ಬೆಟ್ಟದಲ್ಲಿ ಭಾರಿ ಭೂಕುಸಿತ ಸಂಭವಿಸಿದ್ದು, ಬೆಟ್ಟದ ಮೇಲಿದ್ದ ನೂರಾರು ಟನ್ಗಳಷ್ಟು ಕಸದ ರಾಶಿ ಹಾಗೂ ಮಣ್ಣು ಕೆಳಭಾಗಕ್ಕೆ ಕೊಚ್ಚಿ ಬಂದಿದೆ. ಇದರಿಂದ ಬೆಟ್ಟದ ತಪ್ಪಲಿನಲ್ಲಿರುವ ಪೊಲೀಸ್ ವಸತಿ ಗೃಹಗಳ ನಿವಾಸಿಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಸ್ಟೋನ್ ಹಿಲ್ ಬೆಟ್ಟದ ತುದಿಯಲ್ಲಿ ಅವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲಾಗುತ್ತಿದ್ದು, ಇದೇ ಭೂಕುಸಿತಕ್ಕೆ ಪ್ರಮುಖ ಕಾರಣವಾಗಿರಬಹುದು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಭಾರಿ ಪ್ರಮಾಣದ ಕಸ ಹಾಗೂ ಮಣ್ಣು ಏಕಾಏಕಿ ಕೆಳಭಾಗಕ್ಕೆ ಕುಸಿದು ಬಂದಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಹೆಚ್ಚಿಸಿದೆ.
ಬೆಟ್ಟದ ತಪ್ಪಲಿನಲ್ಲಿಯೇ ಪೊಲೀಸ್ ವಸತಿ ಗೃಹಗಳಿರುವುದರಿಂದ, ಮತ್ತಷ್ಟು ಮಣ್ಣು ಹಾಗೂ ಕಸದ ರಾಶಿ ಕುಸಿದುಬಿದ್ದರೆ ವಸತಿ ಸಮುಚ್ಚಯಕ್ಕೆ ಅಪಾಯ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ನಿವಾಸಿಗಳು ಆತಂಕದಲ್ಲಿದ್ದಾರೆ. ಘಟನಾ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಕೂಡಲೇ ಕಸ ಹಾಗೂ ಮಣ್ಣನ್ನು ತೆರವುಗೊಳಿಸಿ, ಬೆಟ್ಟದ ಭಾಗದಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ನಗರಸಭೆ ಸದಸ್ಯ ಅಪ್ಪಣ್ಣ ಮಾತನಾಡಿ, ಸ್ಟೋನ್ ಹಿಲ್ನಲ್ಲಿ ಸಂಗ್ರಹವಾಗಿರುವ ಕಸವನ್ನು ತಕ್ಷಣ ತೆರವುಗೊಳಿಸಬೇಕು. ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ. ಮಳೆಯ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಟ್ಟದ ಭಾಗದಲ್ಲಿ ಮತ್ತಷ್ಟು ಭೂಕುಸಿತ ಸಂಭವಿಸುವ ಆತಂಕವೂ ಎದುರಾಗಿದೆ. ಪೊಲೀಸ್ ವಸತಿ ಗೃಹಗಳ ಸುರಕ್ಷತೆಯ ದೃಷ್ಟಿಯಿಂದ ಸಂಬಂಧಪಟ್ಟ ಇಲಾಖೆ ಕೂಡಲೇ ಕ್ರಮ ಕೈಗೊಳ್ಳಬೇಕಾಗಿದೆ.