ರಾಂಚಿ, ಆ. 10 (DaijiworldNews/AK): ಜಾರ್ಖಂಡ್ನ ರಾಂಚಿಯಲ್ಲಿ ಇಂದು JPSC ಮತ್ತು JSSC ಪರೀಕ್ಷಾರ್ಥಿಗಳು ನಡೆಸಿದ ವಿಧಾನಸಭೆ ಮುತ್ತಿಗೆ ಚಳವಳಿ ತೀವ್ರ ಸ್ವರೂಪ ಪಡೆದುಕೊಂಡಿದೆ.

ಜಾರ್ಖಂಡ್ ವಿಧಾನಸೌಧದ ಕಡೆಗೆ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ಚದುರಿಸಲು ಭದ್ರತಾ ಸಿಬ್ಬಂದಿ ಲಾಠಿಚಾರ್ಜ್ ಹಾಗೂ ಜಲಫಿರಂಗಿ ಬಳಸಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿರುವ ಅಕ್ರಮಗಳಿಂದಾಗಿ ವಿದ್ಯಾರ್ಥಿಗಳ ಭವಿಷ್ಯ ಅನಿಶ್ಚಿತತೆಗೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿ ತಕ್ಷಣವೇ ಪಾರದರ್ಶಕ ಸುಧಾರಣೆಗಳನ್ನು ತರಬೇಕು ಮತ್ತು ಈ ಪ್ರಕರಣವನ್ನು ಸಿಬಿಐ ತನಿಖೆ ಕೊಡಬೇಕೆಂದು ಆಗ್ರಹಿಸಿ ಸಾವಿರಾರು ಅಭ್ಯರ್ಥಿಗಳು ಇಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದರು.
ಬ್ಯಾರಿಕೇಡ್ಗಳನ್ನು ಮುರಿದು ಮುನ್ನುಗ್ಗಲು ಯತ್ನಿಸಿದಾಗ ಪೊಲೀಸರು ಲಾಠಿಚಾರ್ಜ್ ನಡೆಸಿದರು. ಇದಕ್ಕೆ ಪ್ರತಿಯಾಗಿ ಆಕ್ರೋಶಗೊಂಡ ಪ್ರತಿಭಟನಾಕಾರರು ಪೊಲೀಸರತ್ತ ಚಪ್ಪಲಿ ಹಾಗೂ ಬಾಟಲಿಗಳನ್ನು ಎಸೆದರು. ವಿದ್ಯಾರ್ಥಿಗಳು ಮುನ್ನುಗ್ಗುವುದನ್ನು ತಡೆಯಲು ಪೊಲೀಸರು ನೀರಿನ ಕ್ಯಾನಾನ್ಗಳನ್ನು ಬಳಸಿ, ಗುಂಪು ಚದುರಿಸಲು ಯತ್ನಿಸುತ್ತಿದ್ಧಾರೆ. ಬೃಹತ್ ವಾಟರ್ ಗನ್ಗಳಿಂದ ವೇಗವಾಗಿ ರಾಚುತ್ತಿರುವ ನೀರಿನ ಮಧ್ಯದಲ್ಲೇ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಡ್ಯಾನ್ಸ್ ಮಾಡುತ್ತಿರುವ ದೃಶ್ಯ ಕಂಡು ಬಂದಿದೆ.