ಚೆನ್ನೈ, ಆ. 10 (DaijiworldNews/AK): ತಮಿಳುನಾಡಿನ ಶಾಲಾ-ಕಾಲೇಜುಗಳು, ವಿಶ್ವವಿದ್ಯಾಲಯಗಳು, ಸರ್ಕಾರಿ ಕಚೇರಿಗಳು ಹಾಗೂ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಆಯೋಜಿಸುವ ಎಲ್ಲಾ ಅಧಿಕೃತ ಕಾರ್ಯಕ್ರಮಗಳ ಆರಂಭದಲ್ಲಿ ರಾಜ್ಯದ ಅಧಿಕೃತ ಗೀತೆಯಾದ ‘ತಮಿಳು ತಾಯಿ ವಾಳ್ತ್ತು’ ಅನ್ನು ಕಡ್ಡಾಯವಾಗಿ ಮೊದಲು ಹಾಡಬೇಕು ಎಂದು ಆಗ್ರಹಿಸುವ ವಿಶೇಷ ನಿರ್ಣಯವನ್ನು ತಮಿಳುನಾಡು ವಿಧಾನಸಭೆ ಇಂದು ಸರ್ವಾನುಮತದಿಂದ ಅಂಗೀಕರಿಸಿದೆ.

ಕೇಂದ್ರ ಸರ್ಕಾರದ ‘ವಂದೇ ಮಾತರಂ’ ರಾಷ್ಟ್ರೀಯ ಗೀತೆಯನ್ನು ಮೊದಲಿಗೆ ಹಾಡಬೇಕೆಂಬ ನಿರ್ದೇಶನಕ್ಕೆ ಪ್ರತಿಯಾಗಿ, ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಈ ಪ್ರಸ್ತಾವನೆಯನ್ನು ಸದನದಲ್ಲಿ ಮಂಡಿಸಿದರು. ವಿಪಕ್ಷಗಳಾದ ಡಿಎಂಕೆ ಹಾಗೂ ಎಐಎಡಿಎಂಕೆ ಸೇರಿದಂತೆ ಸದನದ ಎಲ್ಲಾ ಪಕ್ಷಗಳು ಈ ನಿರ್ಣಯಕ್ಕೆ ಸಂಪೂರ್ಣ ಬೆಂಬಲ ಸೂಚಿಸಿವೆ.
ಸ್ಪೀಕರ್ ಜೆ.ಸಿ.ಡಿ. ಪ್ರಭಾಕರ್ ಅವರು ನಿರ್ಣಯವು ಸರ್ವಾನುಮತದಿಂದ ಅಂಗೀಕಾರಗೊಂಡಿದೆ ಹಾಗೂ ಇದನ್ನು ಜಾರಿಗೆ ತರಲು ಯಾರ ಅನುಮತಿಯ ಅಗತ್ಯವೂ ಇಲ್ಲ ಎಂದು ಘೋಷಿಸಿದರು. ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿ ಮಾತನಾಡಿದ ಮುಖ್ಯಮಂತ್ರಿ ವಿಜಯ್, “ರಾಜ್ಯದ ಭಾಷಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ವಿಷಯದಲ್ಲಿ ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ. ತಮಿಳು ಎಂದರೆ ನಮಗೆ ಬರಿ ಭಾಷೆಯಷ್ಟೇ ಅಲ್ಲ, ಅದು ನಮ್ಮ ಜೀವ ಮತ್ತು ಭಾವನೆ. ತಾಯಿ ಎಷ್ಟು ಪವಿತ್ರವೋ, ಮಾತೃಭಾಷೆಯೂ ಅಷ್ಟೇ ಪವಿತ್ರ.” ಎಂದು ಹೇಳಿದ್ದಾರೆ.
“ತಮಿಳು ಎಂದರೆ ಹೆಮ್ಮೆ, ತಮಿಳು ಎಂದರೆ ಶಕ್ತಿ. ‘ತಮಿಳು’ ಎನ್ನುವ ಹೆಸರೆತ್ತಿದ ತಕ್ಷಣ ಇಡೀ ತಮಿಳುನಾಡು ಒಂದಾಗಿ ನಿಲ್ಲುತ್ತದೆ. ನಮ್ಮ ರಾಜ್ಯದಲ್ಲಿ ‘ತಮಿಳು ತಾಯಿ ವಾಳ್ತ್ತು’ ಗೀತೆಗೆ ಪ್ರಥಮ ಸ್ಥಾನ ಸಿಗುವುದು ನಮ್ಮ ಹಕ್ಕು. ಇದನ್ನು ಮೊದಲಿಗೆ ಹಾಡುವುದು ದೇಶದ ಐಕ್ಯತೆಗೆ ಅಥವಾ ರಾಜಕೀಯ ವ್ಯವಸ್ಥೆಗೆ ವಿರುದ್ಧವಾದದ್ದಲ್ಲ,” ಎಂದು ಅವರು ಪ್ರತಿಪಾದಿಸಿದರು.