ಅಲಪ್ಪುಳ, ಆ. 10 (DaijiworldNews/TA): ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಟಿಫಾನಿ ಟ್ರಂಪ್ ಅವರ ಪತಿ ಮೈಕೆಲ್ ಬೌಲೋಸ್ ಕೇರಳದ ಅಲಪ್ಪುಳಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದಾರೆ. ಭಾರತದಲ್ಲಿನ ಅಮೆರಿಕದ ರಾಯಭಾರಿ ಸೆರ್ಗಿಯೊ ಗೋರ್ ಕೂಡ ಅವರೊಂದಿಗೆ ಇದ್ದರು ಎನ್ನಲಾಗಿದೆ. ಇಬ್ಬರೂ ಕೇರಳದ ಪ್ರಾಕೃತಿಕ ಸೌಂದುರ್ಯಕ್ಕೆ ಮನಸೋತು ಮೆಚ್ಚುಗೆ ವ್ಯಕ್ತಪಡಿಸಿದ್ಧಾರೆ. ಈ ಭೇಟಿ ಸಂಪೂರ್ಣವಾಗಿ ಖಾಸಗಿ ಭೇಟಿಯಾಗಿತ್ತು ಎನ್ನಲಾಗಿದೆ.

ಅಲಪ್ಪುಳಕ್ಕೆ ಆಗಮಿಸಿದ ಗಣ್ಯರ ತಂಡ ಹೌಸ್ಬೋಟ್ನಲ್ಲಿ ಕೇರಳದ ಪ್ರಸಿದ್ಧ ಹಿನ್ನೀರಿನ ಸೌಂದರ್ಯವನ್ನು ವೀಕ್ಷಿಸಿತು. ಇದೇ ವೇಳೆ ನೆಹರು ಟ್ರೋಫಿ ದೋಣಿ ಸ್ಪರ್ಧೆಯ ಅಭ್ಯಾಸವನ್ನೂ ವೀಕ್ಷಿಸಿದರು. ಚುಂಡನ್ ದೋಣಿಯನ್ನು ವೀಕ್ಷಿಸುವುದು ಈ ಭೇಟಿಯ ಪ್ರಮುಖ ಉದ್ದೇಶವಾಗಿತ್ತು ಎಂದು ತಿಳಿದುಬಂದಿದೆ.
ಕೇರಳಕ್ಕೆ ಇದು ತಮ್ಮ ಮೊದಲ ಭೇಟಿ ಎಂದು ತಿಳಿಸಿರುವ ರಾಯಭಾರಿ ಸೆರ್ಗಿಯೊ ಗೋರ್, ರಾಜ್ಯದ ನೈಸರ್ಗಿಕ ಸೌಂದರ್ಯ, ಸಾಂಸ್ಕೃತಿಕ ಪರಂಪರೆ ಹಾಗೂ ಅಂತರರಾಷ್ಟ್ರೀಯ ಪ್ರವಾಸೋದ್ಯಮ ತಾಣವಾಗಿ ಕೇರಳದ ಬೆಳವಣಿಗೆಯನ್ನು ಮೆಚ್ಚಿಕೊಂಡಿದ್ದಾರೆ. ಆರೋಗ್ಯ ಮತ್ತು ಆಯುರ್ವೇದ ಪ್ರವಾಸೋದ್ಯಮ ಕ್ಷೇತ್ರಗಳಲ್ಲಿನ ಕೇರಳದ ಸಾಮರ್ಥ್ಯವನ್ನು ಬಳಸಿಕೊಂಡು ಅಮೆರಿಕದಿಂದ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಬಹುದು ಎಂದು ಅವರು ಹೇಳಿದ್ದಾರೆ.
ಅಲ್ಲದೆ, ಕೇರಳ ಮತ್ತು ಅಮೆರಿಕದ ಪ್ರಮುಖ ನಗರಗಳ ನಡುವೆ ‘ಸಹೋದರಿ ನಗರಗಳು’ ಮಾದರಿಯ ಸಹಭಾಗಿತ್ವ ಬೆಳೆಸುವ ಮೂಲಕ ಸಾಂಸ್ಕೃತಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಜನರಿಂದ ಜನರ ನಡುವಿನ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಸಾಧ್ಯತೆಗಳ ಬಗ್ಗೆ ರಾಯಭಾರಿ ಪ್ರಸ್ತಾಪಿಸಿದ್ದಾರೆ. ಕೊಚ್ಚಿಗೆ ಆಗಮಿಸಿದ ಅಮೆರಿಕದ ರಾಯಭಾರಿ ಸೆರ್ಗಿಯೊ ಗೋರ್, ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಉನ್ನತ ಶಿಕ್ಷಣ, ಪ್ರವಾಸೋದ್ಯಮ, ಸಂಸ್ಕೃತಿ, ಹೂಡಿಕೆ, ಕರಾವಳಿ ಮತ್ತು ಬಂದರು ಅಭಿವೃದ್ಧಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕೇರಳ ಮತ್ತು ಅಮೆರಿಕ ನಡುವಿನ ಸಹಕಾರವನ್ನು ಬಲಪಡಿಸುವ ಕುರಿತು ಚರ್ಚೆ ನಡೆಯಿತು.
ಬಂದರು, ಲಾಜಿಸ್ಟಿಕ್ಸ್ ಮತ್ತು ಬಂದರು ಆಧಾರಿತ ಅಭಿವೃದ್ಧಿಯಲ್ಲಿ ಕೇರಳಕ್ಕೆ ಅಪಾರ ಹೂಡಿಕೆ ಅವಕಾಶಗಳಿವೆ ಎಂದು ಮುಖ್ಯಮಂತ್ರಿ ತಿಳಿಸಿದರು. ವಿಝಿಂಜಂ ಮತ್ತು ಕೊಚ್ಚಿ ಬಂದರುಗಳು, ಹಡಗು ನಿರ್ಮಾಣ ಮತ್ತು ದುರಸ್ತಿ, ಹಸಿರು ಬಂಕರಿಂಗ್ ಹಾಗೂ ಸಂಬಂಧಿತ ಕೈಗಾರಿಕೆಗಳಲ್ಲಿನ ಹೂಡಿಕೆ ಅವಕಾಶಗಳ ಬಗ್ಗೆಯೂ ಚರ್ಚೆ ನಡೆಯಿತು. ಕೇರಳದಲ್ಲಿ ಹೂಡಿಕೆ ಮಾಡಲು ಬಯಸುವ ಅಮೆರಿಕದ ಕಂಪನಿಗಳಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಹಾಗೂ ಭಾರತ-ಅಮೆರಿಕ ವಾಣಿಜ್ಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಸಹಕರಿಸುವುದಾಗಿ ಸೆರ್ಗಿಯೊ ಗೋರ್ ತಿಳಿಸಿದ್ದಾರೆ. ಮೈಕೆಲ್ ಬೌಲೋಸ್ ಅವರ ಅಲಪ್ಪುಳ ಭೇಟಿ ಖಾಸಗಿ ಪ್ರವಾಸವಾಗಿದ್ದು, ಕೇರಳದ ಹಿನ್ನೀರು, ಸಾಂಸ್ಕೃತಿಕ ಪರಂಪರೆ ಹಾಗೂ ಪ್ರಸಿದ್ಧ ಚುಂಡನ್ ದೋಣಿ ಸ್ಪರ್ಧೆಯತ್ತ ಮತ್ತೊಮ್ಮೆ ಅಂತರರಾಷ್ಟ್ರೀಯ ಗಮನ ಸೆಳೆದಿದೆ.