ರಾಜಸ್ಥಾನ, ಆ. 10 (DaijiworldNews/TA): ಮನೆಯವರಿಗೆ ತಿಳಿಯದಂತೆ ಜಮೀನಿನಲ್ಲಿ ಬಚ್ಚಿಟ್ಟಿದ್ದ ಕಷ್ಟಪಟ್ಟು ಸಂಪಾದಿಸಿದ ರೂ. 5 ಲಕ್ಷ ನಗದು ಹಣವನ್ನು ಗೆದ್ದಲುಗಳು ತಿಂದು ಹಾಕಿರುವ ಘಟನೆ ರಾಜಸ್ಥಾನದ ಬಾಲೋತ್ರಾ ಜಿಲ್ಲೆಯ ಪಚಪದ್ರಾದಲ್ಲಿ ನಡೆದಿದೆ.

ಪಚಪದ್ರಾ ನಿವಾಸಿ ರೈತ ರಂಗು ಅಲಿಯಾಸ್ ಮಾಂಗಿಲಾಲ್ ಮೇಘವಾಲ್ ಅವರು ಜಮೀನಿನಲ್ಲಿ ಶೆಡ್ ನಿರ್ಮಿಸಲು ರೂ.5 ಲಕ್ಷ ಹಣವನ್ನು ಕೂಡಿಟ್ಟಿದ್ದರು. ಮನೆಯಲ್ಲಿಟ್ಟರೆ ಕಳ್ಳತನವಾಗಬಹುದು ಅಥವಾ ಕುಟುಂಬಸ್ಥರು ಖರ್ಚು ಮಾಡಬಹುದು ಎಂಬ ಆತಂಕದಿಂದ ಯಾರಿಗೂ ತಿಳಿಸದೆ ಹಣವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ರಾತ್ರೋರಾತ್ರಿ ಜಮೀನಿನಲ್ಲಿ ಹೂತುಹಾಕಿದ್ದರು.
ಮಾಂಗಿಲಾಲ್ ಅವರಿಗೆ ಮರೆವಿನ ಸಮಸ್ಯೆಯಿದ್ದು, ಹಣದ ಅಗತ್ಯ ಬಂದಾಗ ಅದನ್ನು ಜಮೀನಿನಲ್ಲಿ ನಿಖರವಾಗಿ ಎಲ್ಲಿ ಹೂತಿಟ್ಟಿದ್ದರು ಎಂಬುದೇ ನೆನಪಾಗಲಿಲ್ಲ. ಸುಮಾರು 10 ಬಿಘಾ ಜಮೀನಿನಲ್ಲಿ ಸಾಕಷ್ಟು ಹುಡುಕಾಟ ನಡೆಸಿದರೂ ಹಣ ಪತ್ತೆಯಾಗಲಿಲ್ಲ. ಬಳಿಕ ಕುಟುಂಬಸ್ಥರಿಗೂ ವಿಷಯ ತಿಳಿಸಿ ಎಲ್ಲರೂ ಸೇರಿ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.
ಇತ್ತೀಚೆಗೆ ಮಳೆಗಾಲದ ಹಿನ್ನೆಲೆಯಲ್ಲಿ ಜಮೀನನ್ನು ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡುವ ಸಂದರ್ಭದಲ್ಲಿ ಪ್ಲಾಸ್ಟಿಕ್ ಚೀಲವೊಂದು ಮೇಲಕ್ಕೆ ಬಂದಿದೆ. ಮರುದಿನ ಜಮೀನಿಗೆ ತೆರಳಿದಾಗ ಚೀಲ ಪತ್ತೆಯಾಗಿದ್ದು, ಅದನ್ನು ತೆರೆದು ನೋಡಿದ ಕುಟುಂಬಸ್ಥರಿಗೆ ಆಘಾತ ಕಾದಿತ್ತು. ಚೀಲದೊಳಗಿದ್ದ ರೂ. 5 ಲಕ್ಷ ಮೌಲ್ಯದ ನೋಟುಗಳನ್ನು ಗೆದ್ದಲುಗಳು ಸಂಪೂರ್ಣವಾಗಿ ತಿಂದುಹಾಕಿದ್ದವು. ಬಹುತೇಕ ನೋಟುಗಳು ಬಳಕೆಗೆ ಬಾರದಷ್ಟು ಹಾನಿಗೊಳಗಾಗಿದ್ದವು.
ಹಾಳಾದ ನೋಟುಗಳನ್ನು ತೆಗೆದುಕೊಂಡು ಕುಟುಂಬಸ್ಥರು ಪಚಪದ್ರಾದ ಎಸ್ಬಿಐ ಶಾಖೆ ಹಾಗೂ ಬಳಿಕ ಬಾಲೋತ್ರಾದ ಮುಖ್ಯ ಶಾಖೆಗೆ ತೆರಳಿದ್ದಾರೆ. ಆದರೆ ನೋಟುಗಳ ಸ್ಥಿತಿ ತೀರಾ ಹದಗೆಟ್ಟಿದ್ದರಿಂದ ಸ್ಥಳೀಯ ಬ್ಯಾಂಕ್ಗಳು ಅವುಗಳನ್ನು ಸ್ವೀಕರಿಸಲು ನಿರಾಕರಿಸಿವೆ. ಜೈಪುರದಲ್ಲಿರುವ ಆರ್ಬಿಐ ಅಥವಾ ಎಸ್ಬಿಐನ ಸಂಬಂಧಪಟ್ಟ ಕಚೇರಿಗೆ ತೆರಳಿದರೆ ನೋಟುಗಳನ್ನು ಪರಿಶೀಲಿಸಿ ಬದಲಾಯಿಸುವ ಸಾಧ್ಯತೆ ಇದೆ ಎಂದು ಬ್ಯಾಂಕ್ ಸಿಬ್ಬಂದಿ ಸಲಹೆ ನೀಡಿದ್ದಾರೆ. ಆದರೆ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮಾಂಗಿಲಾಲ್ ಕುಟುಂಬಕ್ಕೆ ಜೈಪುರಕ್ಕೆ ತೆರಳಲು ಬೇಕಾದ ಹಣವೂ ಇಲ್ಲದಂತಾಗಿದೆ. ವರ್ಷಗಳ ಕಷ್ಟಪಟ್ಟು ಸಂಪಾದಿಸಿದ ಹಣ ಕಣ್ಣೆದುರೇ ನಾಶವಾಗಿರುವುದರಿಂದ ಕುಟುಂಬಸ್ಥರು ಕಂಗಾಲಾಗಿದ್ದಾರೆ.