ಬೆಂಗಳೂರು, ಆ. 10 (DaijiworldNews/TA): ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಆಗಸ್ಟ್ 13ರಂದು ಕರ್ನಾಟಕ ಬಂದ್ ನಡೆಸುವುದಾಗಿ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ವಾಟಾಳ್ ನೇತೃತ್ವದಲ್ಲಿ ನಡೆದ ಪ್ರತಿಭಟನೆ ವೇಳೆ ಅವರು ಈ ಘೋಷಣೆ ಮಾಡಿದ್ದು, ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.

ಕಳಸಾ-ಬಂಡೂರಿ, ಮಹದಾಯಿ ಹಾಗೂ ಮೇಕೆದಾಟು ಯೋಜನೆಗಳನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ಮೇಕೆದಾಟು ಯೋಜನೆಗೆ ತಮಿಳುನಾಡು ರಾಜಕೀಯ ಕಾರಣಗಳಿಂದ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ಆರೋಪಿಸಿದರು.
ಆಗಸ್ಟ್ 13ರಂದು ನಡೆಯಲಿರುವ ಕರ್ನಾಟಕ ಬಂದ್ನ್ನು ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ. “ಆಗಸ್ಟ್ 13ರಂದು ಬಂದ್ ಮಾಡೇ ಮಾಡುತ್ತೇವೆ” ಎಂದು ಸ್ಪಷ್ಟಪಡಿಸಿದ ಅವರು, ರಾಜ್ಯದ ಜನರು ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು. ಮೇಕೆದಾಟು ಯೋಜನೆ ಜಾರಿಯಾದರೆ ಬೆಂಗಳೂರು ಸೇರಿದಂತೆ ರಾಜ್ಯದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ನೆರವಾಗಲಿದೆ ಎಂದು ಅವರು ಪ್ರತಿಪಾದಿಸಿದರು.
ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ತೊಂದರೆಯಾಗುವುದಿಲ್ಲ. ಯೋಜನೆಯಿಂದ ವಿದ್ಯುತ್ ಉತ್ಪಾದನೆಯೂ ಸಾಧ್ಯವಾಗಲಿದೆ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ. ತಮಿಳುನಾಡು ಸರ್ಕಾರ ಈ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ಆಗ್ರಹಿಸಿದ ಅವರು, ಬೆಂಗಳೂರು ನಗರದಲ್ಲಿ ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳ ಜನರು ವಾಸಿಸುತ್ತಿದ್ದಾರೆ. ಹೀಗಾಗಿ ಈ ಹೋರಾಟ ಯಾವುದೇ ಭಾಷಿಕರ ವಿರುದ್ಧವಲ್ಲ, ಬೆಂಗಳೂರು ಜನರ ಕುಡಿಯುವ ನೀರಿನ ಹಕ್ಕಿಗಾಗಿ ನಡೆಯುತ್ತಿರುವ ಹೋರಾಟ ಎಂದು ಹೇಳಿದ್ದಾರೆ.
ಕರ್ನಾಟಕ ಬಂದ್ ಕೈಬಿಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾಡಿರುವ ಮನವಿಗೂ ವಾಟಾಳ್ ನಾಗರಾಜ್ ಪ್ರತಿಕ್ರಿಯಿಸಿದ್ದಾರೆ. ಮೇಕೆದಾಟು ಯೋಜನೆಗಾಗಿ ಡಿ.ಕೆ. ಶಿವಕುಮಾರ್ ಈ ಹಿಂದೆ ಪಾದಯಾತ್ರೆ ನಡೆಸಿದ್ದರು. ಆದರೆ ಪಾದಯಾತ್ರೆ ನಡೆದು ಹಲವು ವರ್ಷಗಳಾದರೂ ಯೋಜನೆ ಜಾರಿಗೆ ಯಾವುದೇ ಸ್ಪಷ್ಟ ಪ್ರಗತಿ ಕಂಡುಬಂದಿಲ್ಲ ಎಂದು ವಾಟಾಳ್ ಟೀಕಿಸಿದ್ದಾರೆ. “ಮೇಕೆದಾಟು ಮಾಡಬೇಕೆಂದು ಪಾದಯಾತ್ರೆ ಮಾಡಿ ನಾಲ್ಕೂವರೆ ವರ್ಷವಾಗಿದೆ. ಇಲ್ಲಿಯವರೆಗೆ ಅಲ್ಲಿ ಒಂದು ಸಣ್ಣ ಕಲ್ಲನ್ನೂ ಹಾಕಿಲ್ಲ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಬಂದ್ಗೆ 2,000ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿವೆ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ. ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಸಂಘಟನೆಗಳು ಬಂದ್ಗೆ ಬೆಂಬಲ ಸೂಚಿಸಿವೆ ಎಂದು ಅವರು ತಿಳಿಸಿದ್ದಾರೆ. ಬಂದ್ ಯಶಸ್ವಿಗೊಳಿಸಲು ರಾಜ್ಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿರುವ ವಾಟಾಳ್, ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಹೋರಾಟ ಮುಂದುವರಿಯಲಿದೆ ಎಂದು ಹೇಳಿದ್ದಾರೆ. ಆಗಸ್ಟ್ 13ರಂದು ಕರ್ನಾಟಕ ಬಂದ್ ನಡೆಯಲಿದೆ ಎಂಬ ವಾಟಾಳ್ ನಾಗರಾಜ್ ಅವರ ಘೋಷಣೆ ಇದೀಗ ಬಂದ್ ಕುರಿತ ಚರ್ಚೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.