ಹೈದರಾಬಾದ್, ಆ. 10 (DaijiworldNews/TA): ಸಾಮಾಜಿಕ ಜಾಲತಾಣಗಳಲ್ಲಿ ‘ಬಾಯ್ಫ್ರೆಂಡ್ ಫಾರ್ ರೆಂಟ್’ ಹೆಸರಿನಲ್ಲಿ ಆಕರ್ಷಕ ಜಾಹೀರಾತುಗಳನ್ನು ನೀಡಿ ಯುವತಿಯರಿಂದ ಹಣ ಹಾಗೂ ವೈಯಕ್ತಿಕ ಮಾಹಿತಿಯನ್ನು ಕದಿಯುತ್ತಿರುವ ಸೈಬರ್ ವಂಚಕರ ಬಗ್ಗೆ ಹೈದರಾಬಾದ್ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

‘Rent Boyfriend – Your Personal Companion’ ಸೇರಿದಂತೆ ವಿವಿಧ ಶೀರ್ಷಿಕೆಗಳಲ್ಲಿ ಇನ್ಸ್ಟಾಗ್ರಾಮ್, ಫೇಸ್ಬುಕ್ ಹಾಗೂ ಟೆಲಿಗ್ರಾಂನಲ್ಲಿ ಜಾಹೀರಾತುಗಳನ್ನು ಹಾಕಲಾಗುತ್ತಿದೆ. AI ಮೂಲಕ ಸೃಷ್ಟಿಸಿದ ಅಥವಾ ಇತರರ ಸಾಮಾಜಿಕ ಜಾಲತಾಣ ಖಾತೆಗಳಿಂದ ಕದ್ದ ಯುವಕರ ಫೋಟೋಗಳನ್ನು ಬಳಸಿಕೊಂಡು, ಕಾಫಿ ಡೇಟ್, ಸಿನಿಮಾ, ಶಾಪಿಂಗ್ ಸೇರಿದಂತೆ ವಿವಿಧ ರೀತಿಯ ಸಂಗಾತಿ ಸೇವೆಗಳನ್ನು ಒದಗಿಸುವುದಾಗಿ ನಂಬಿಸಲಾಗುತ್ತಿದೆ.
ಇಂತಹ ಜಾಹೀರಾತುಗಳನ್ನು ನೋಡಿ ಸಂಪರ್ಕಿಸುವವರೊಂದಿಗೆ ಮೊದಲು ಮಾತುಕತೆ ನಡೆಸಿ ವಂಚಕರು ನಂಬಿಕೆ ಗಳಿಸುತ್ತಾರೆ. ಬಳಿಕ ನೋಂದಣಿ ಶುಲ್ಕ, ಭದ್ರತಾ ಠೇವಣಿ ಅಥವಾ ಬುಕಿಂಗ್ ಶುಲ್ಕ ಎಂದು ಹೇಳಿ QR ಕೋಡ್ ಅಥವಾ UPI ಮೂಲಕ ಮುಂಗಡ ಹಣ ಪಾವತಿಸುವಂತೆ ಸೂಚಿಸುತ್ತಾರೆ. ಹಣ ವರ್ಗಾವಣೆಯಾದ ಬಳಿಕ ವಂಚಕರು ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಮಾಡಿ ಸಂಪರ್ಕ ಕಡಿತಗೊಳಿಸುತ್ತಾರೆ. ಈ ಮೂಲಕ ಯುವತಿಯರು ಹಣ ಕಳೆದುಕೊಳ್ಳುವ ಜೊತೆಗೆ ತಮ್ಮ ವೈಯಕ್ತಿಕ ಮಾಹಿತಿಯನ್ನೂ ಅಪರಿಚಿತರೊಂದಿಗೆ ಹಂಚಿಕೊಳ್ಳುವ ಅಪಾಯ ಎದುರಾಗುತ್ತದೆ.
ಅಪರಿಚಿತ ಹಾಗೂ ಪರಿಶೀಲಿಸದ ಆನ್ಲೈನ್ ಖಾತೆಗಳೊಂದಿಗೆ ಮೊಬೈಲ್ ಸಂಖ್ಯೆ, ಫೋಟೋ, ವಿಳಾಸ ಅಥವಾ ಇತರ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳದಂತೆ ಪೊಲೀಸರು ಸೂಚಿಸಿದ್ದಾರೆ. ಇಂತಹ ಮಾಹಿತಿಗಳು ವಂಚಕರ ಕೈಗೆ ಸಿಕ್ಕರೆ ಬ್ಲ್ಯಾಕ್ಮೇಲ್, ಕಿರುಕುಳ ಸೇರಿದಂತೆ ಹಲವು ರೀತಿಯ ಅಪಾಯಗಳಿಗೆ ಕಾರಣವಾಗಬಹುದು. ಆನ್ಲೈನ್ನಲ್ಲಿ ಪರಿಚಯವಾದ ವ್ಯಕ್ತಿಗಳನ್ನು ನೇರವಾಗಿ ಭೇಟಿಯಾಗುವುದರಿಂದಲೂ ಸುರಕ್ಷತಾ ಸಮಸ್ಯೆಗಳು ಎದುರಾಗುವ ಸಾಧ್ಯತೆಯಿದೆ. ಹೈದರಾಬಾದ್ ನಗರ ಪೊಲೀಸ್ ಆಯುಕ್ತ ವಿ.ಸಿ. ಸಜ್ಜನರ್ ಅವರು ಸಾಮಾಜಿಕ ಜಾಲತಾಣಗಳ ಬಳಕೆಯ ಕುರಿತು ಪೋಷಕರು ತಮ್ಮ ಮಕ್ಕಳೊಂದಿಗೆ ಜಾಗೃತಿಯಿಂದ ಇರಬೇಕು ಎಂದು ಸಲಹೆ ನೀಡಿದ್ದಾರೆ.
ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಯಾರೊಂದಿಗೆ ಸಂವಹನ ನಡೆಸುತ್ತಿದ್ದಾರೆ, ಯಾವ ರೀತಿಯ ಜಾಹೀರಾತುಗಳನ್ನು ವೀಕ್ಷಿಸುತ್ತಿದ್ದಾರೆ ಎಂಬುದರ ಬಗ್ಗೆ ಗಮನ ಹರಿಸಬೇಕು. ಅಪರಿಚಿತ ಪ್ರೊಫೈಲ್ಗಳನ್ನು ಸುಲಭವಾಗಿ ನಂಬಬಾರದು ಹಾಗೂ ಪರಿಶೀಲಿಸದ ಆನ್ಲೈನ್ ಸೇವೆಗಳಿಗೆ ಮುಂಗಡ ಹಣ ಪಾವತಿಸಬಾರದು ಎಂದು ಪೊಲೀಸರು ಎಚ್ಚರಿಸಿದ್ದಾರೆ. ಸೈಬರ್ ವಂಚನೆಗೆ ಒಳಗಾದಲ್ಲಿ ಅಥವಾ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣ 1930 ಸೈಬರ್ ಕ್ರೈಮ್ ಸಹಾಯವಾಣಿಯನ್ನು ಸಂಪರ್ಕಿಸಿ ದೂರು ದಾಖಲಿಸುವಂತೆ ಪೊಲೀಸರು ತಿಳಿಸಿದ್ದಾರೆ.