ಬೆಂಗಳೂರು, ಆ. 10 (DaijiworldNews/AA): ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ನೂರಾರು ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ಕರ್ನಾಟಕ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ.

ನಾಗೇಂದ್ರ ಅವರ ಜಾಮೀನು ಆದೇಶದಲ್ಲಿದ್ದ ಪ್ರಮುಖ ಷರತ್ತೊಂದಕ್ಕೆ ನ್ಯಾಯಾಲಯವು ತಡೆ ನೀಡಿದೆ. ವಿಶೇಷ ನ್ಯಾಯಾಲಯವು ಜಾಮೀನು ನೀಡುವಾಗ 'ನ್ಯಾಯಾಲಯದ ಅನುಮತಿಯಿಲ್ಲದೆ ರಾಜ್ಯ ಬಿಟ್ಟು ತೆರಳಬಾರದು' ಎಂದು ವಿಧಿಸಿದ್ದ ಷರತ್ತಿಗೆ ಹೈಕೋರ್ಟ್ ಸಡಿಲಿಕೆ ನೀಡಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು 2024ರ ಅಕ್ಟೋಬರ್ 14ರಂದು ನಾಗೇಂದ್ರ ಅವರಿಗೆ ಜಾಮೀನು ನೀಡುವಾಗ ಕರ್ನಾಟಕ ರಾಜ್ಯದಿಂದ ಹೊರಗೆ ಪ್ರಯಾಣಿಸಬೇಕಾದರೆ ನ್ಯಾಯಾಲಯದಿಂದ ಮುಂಚಿತವಾಗಿ ಲಿಖಿತ ಅನುಮತಿ ಪಡೆಯುವುದು ಕಡ್ಡಾಯ ಎಂಬ ಷರತ್ತು ವಿಧಿಸಿತ್ತು. ಇದೀಗ ಅನುಮತಿ ಇಲ್ಲದೆ ರಾಜ್ಯ ಬಿಟ್ಟು ತೆರಳುವಂತಿಲ್ಲ ಎಂಬ ಷರತ್ತನ್ನು ಮಾರ್ಪಡಿಸಿ ಅನುಮತಿಯಿಲ್ಲದೆ ದೇಶ ಬಿಟ್ಟು ತೆರಳುವಂತಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ಪ್ರಕರಣದಲ್ಲಿ ಆಕ್ಷೇಪಣೆ ಸಲ್ಲಿಸಲು ಜಾರಿ ನಿರ್ದೇಶನಾಲಯಕ್ಕೆ (ಇಡಿ) ಆ. 12 ರವರೆಗೆ ಕಾಲಾವಕಾಶ ನೀಡಲಾಗಿದೆ.