ನವದೆಹಲಿ, ಆ. 10 (DaijiworldNews/AK): ಜಾರ್ಖಂಡ್ನಲ್ಲಿ ವಿವಿಧ ನೇಮಕಾತಿ ಪರೀಕ್ಷೆಗಳಲ್ಲಿ ನಡೆದ ಅಕ್ರಮಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಉದ್ಯೋಗಾಕಾಂಕ್ಷಿಗಳ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ.

ಈ ವಿಚಾರಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ತಮ್ಮದೇ ಮೈತ್ರಿಕೂಟ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಎಕ್ಸ್ನಲ್ಲಿ ಅವರು ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, ವಿದ್ಯಾರ್ಥಿಗಳ ವಿರುದ್ಧ ಬಲಪ್ರಯೋಗ ತಪ್ಪು. ವಿದ್ಯಾರ್ಥಿಗಳಿಗೆ ಶಾಂತಿಯುತ ಪ್ರತಿಭಟನೆ ಮಾಡುವ ಹಕ್ಕಿದೆ. ಸಂವಾದ ಮಾತ್ರ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ.
ಪ್ರತಿಭಟನಾ ನಿರತ ವಿದ್ಯಾರ್ಥಿಗಳೊಂದಿಗೆ ಸರ್ಕಾರ ತಕ್ಷಣ ಮಾತುಕತೆ ನಡೆಸಬೇಕು. ಅವರ ಕಳವಳಗಳನ್ನು ಆಲಿಸಬೇಕು. ಈ ಮೂಲಕ ಅವರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಜಾರ್ಖಂಡ್ನ ರಾಂಚಿಯಲ್ಲಿ ಇಂದು JPSC ಮತ್ತು JSSC ಪರೀಕ್ಷಾರ್ಥಿಗಳು ನಡೆಸಿದ ವಿಧಾನಸಭೆ ಮುತ್ತಿಗೆ ಚಳವಳಿ ಉಗ್ರ ಸ್ವರೂಪ ಪಡೆದುಕೊಂಡಿದೆ. ಜಾರ್ಖಂಡ್ವಿಧಾನಸೌಧದ ಕಡೆಗೆ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ಚದುರಿಸಲು ಭದ್ರತಾ ಸಿಬ್ಬಂದಿ ಜಲಫಿರಂಗಿ ಬಳಸಿದ್ದಾರೆ. ಅಲ್ಲದೇ ಲಾಠಿಚಾರ್ಜ್ ಮಾಡಿದ್ದರು. ಈ ಸಮಯದಲ್ಲಿ ಅಶ್ರುವಾಯು ಬಳಸಲಾಗಿದೆ ಎಂದು ವರದಿಯಾಗಿದೆ.