ನವದೆಹಲಿ, ಆ. 11 (DaijiworldNews/AA): ಪ್ರತಿಪಕ್ಷಗಳ ನಿರಂತರ ಪ್ರತಿಭಟನೆ ಹಾಗೂ ಸಂಸತ್ ಕಲಾಪಕ್ಕೆ ಅಡ್ಡಿಪಡಿಸುತ್ತಿರುವುದನ್ನು ಖಂಡಿಸಿ ಎನ್ಡಿಎ ಸಂಸದರು ಮಂಗಳವಾರ ಸಂಸತ್ ಆವರಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಸಂಸತ್ ಮುಂಗಾರು ಅಧಿವೇಶನದ 17ನೇ ದಿನವಾದ ಇಂದೂ ಆಡಳಿತಾರೂಢ ಎನ್ಡಿಎ ಹಾಗೂ ಪ್ರತಿಪಕ್ಷಗಳ ನಡುವಿನ ಸಂಘರ್ಷ ಮುಂದುವರಿದಿದೆ. ವಿದ್ಯಾರ್ಥಿಗಳ ಪ್ರತಿಭಟನೆ ಹಾಗೂ ಪೊಲೀಸ್ ಕ್ರಮದ ಕುರಿತು ಚರ್ಚೆಯಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಿಂದೆ ಸರಿಯುತ್ತಿದ್ದಾರೆ ಎಂದು ಎನ್ಡಿಎ ಸದಸ್ಯರು ಆರೋಪ ಮಾಡಿದ್ದಾರೆ.
ವಿರೋಧ ಪಕ್ಷದ ವಿರುದ್ಧ ಎನ್ಡಿಎ ಸಂಸದರಿಂದ ಆಕ್ರೋಶ
"ಪ್ರತಿಪಕ್ಷಗಳು ಮೊದಲು ಚರ್ಚೆಗೆ ಒತ್ತಾಯಿಸಿ ಇದೀಗ ಹಿಂದೆ ಸರಿದಿವೆ" ಎಂದು ಬಿಜೆಪಿ ಸಂಸದೆ ಕಂಗನಾ ರಣಾವತ್ ಆರೋಪಿಸಿದ್ದಾರೆ. "ನಾವು ಚರ್ಚೆಗೆ ಸಿದ್ಧ, ಆದರೆ ರಾಹುಲ್ ಗಾಂಧಿ ಸಿದ್ಧರಿಲ್ಲ" ಎಂದು ಬಿಜೆಪಿ ಸಂಸದ ಸಂಜಯ್ ಜೈಸ್ವಾಲ್ ವಾಗ್ದಾಳಿ ನಡೆಸಿದ್ದಾರೆ. "ಅಮಿತ್ ಶಾ ಜೀ ಉತ್ತರ ನೀಡುತ್ತಾರೆ, ರಾಹುಲ್ ಗಾಂಧಿ ಓಡಿಹೋಗಬೇಡಿ" ಎಂದು ಬಿಜೆಪಿ ಸಂಸದ ಮನೋಜ್ ತಿವಾರಿ ಟೀಕಿಸಿದ್ದಾರೆ. "ತಾವು ಎತ್ತಿರುವ ಪ್ರಶ್ನೆಗಳಿಗೆ ಗೃಹ ಸಚಿವ ಅಮಿತ್ ಶಾ ಉತ್ತರಿಸಲು ಸಿದ್ಧರಾಗಿರುವಾಗ ರಾಹುಲ್ ಗಾಂಧಿ ಸಂಸತ್ನಿಂದ ಓಡಿ ಹೋಗಬಾರದು" ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.
ಲೋಕಸಭೆ ಕಲಾಪ ಮಧ್ಯಾಹ್ನ 2ಕ್ಕೆ ಮುಂದೂಡಿಕೆ
ಅಮಿತ್ ಶಾ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿಪಕ್ಷ ಸದಸ್ಯರು ಪ್ರತಿಭಟನೆ ನಡೆಸಿದರು. ಈ ಹಿನ್ನೆಲೆ ಲೋಕಸಭೆಯ ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಗಿದೆ.
ಮಂಗಳವಾರ ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಡಿಸಿರುವ ಎರಡು ಪ್ರಮುಖ ಮಸೂದೆಗಳನ್ನು ಪರಿಗಣಿಸಿ ಅಂಗೀಕರಿಸುವ ಸಾಧ್ಯತೆಯಿದೆ. ಜೊತೆಗೆ ಕೇರಳ (ಹೆಸರು ಬದಲಾವಣೆ) ಮಸೂದೆ, 2026ರ ಮೂಲಕ ಸಂವಿಧಾನದ ಮೊದಲ ಅನುಸೂಚಿಗೆ ತಿದ್ದುಪಡಿ ತಂದು ರಾಜ್ಯದ ಅಧಿಕೃತ ಹೆಸರನ್ನು 'ಕೇರಳ'ದಿಂದ 'ಕೇರಳಂ' ಎಂದು ಬದಲಾಯಿಸುವ ಪ್ರಸ್ತಾವನೆ ಇದೆ.